ಉಡುಪಿ: ವಿಜಯದಶಮಿ ಪರ್ವದ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಸಂಕೇತವಾದ ಭತ್ತದ ತೆನೆಯನ್ನು ಪೂಜಿಸಿ ಶ್ರೀಕೃಷ್ಣನಿಗೆ ಸಮರ್ಪಿಸುವ ಮೂಲಕ ಸಂಪ್ರದಾಯವನ್ನು ಪಾಲಿಸಲಾಯಿತು.
ಪರಂಪರೆಯಂತೆ ಸೋದೆ ಮಠದ ಮುಂಭಾಗದಲ್ಲಿ ಭತ್ತದ ತೆನೆಗೆ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ತೆನೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ, ಮಂಗಳವಾದ್ಯಗಳ ನಾದದೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ನಡೆಸಿ ಶ್ರೀಕೃಷ್ಣ ಮಠಕ್ಕೆ ತರಲಾಯಿತು.
ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುವ ಶ್ರೀಕೃಷ್ಣನ ಗರ್ಭಗುಡಿಯ ಪೂರ್ವದ ಬಾಗಿಲನ್ನು ತೆರೆದು, ಭತ್ತದ ತೆನೆಯನ್ನು ಕೃಷ್ಣನಿಗೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿ ಸಮೃದ್ಧಿ, ಧಾನ್ಯವೃದ್ಧಿ ಹಾಗೂ ಲೋಕಕಲ್ಯಾಣವನ್ನು ಸಂಕೇತಿಸುವ ಈ ಆಚರಣೆ ಧಾರ್ಮಿಕ ಮಹತ್ವವನ್ನು ಸಾರಿತು.
ಪೂಜೆಯ ಬಳಿಕ ಮಠದ ಮುಂಭಾಗದಲ್ಲಿರುವ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠಗಳ ಸ್ವಾಮೀಜಿಗಳ ಮಠಗಳು ಹಾಗೂ ಇತರ ಉಪಮಠಗಳಿಗೆ ಸಂಪ್ರದಾಯದಂತೆ ತೆನೆಯನ್ನು ವಿತರಿಸಲಾಯಿತು. ನಂತರ ತೆನೆಯನ್ನು ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಬಡಗುಮಾಳಿಗೆಗೆ ಕೊಂಡೊಯ್ದು ಭಕ್ತರಿಗೆ ಹಂಚಲಾಯಿತು.
ತೆನೆಪೂಜೆಯು ಕೃಷಿ ಪರಂಪರೆ, ಧಾರ್ಮಿಕ ನಂಬಿಕೆ ಹಾಗೂ ಪ್ರಕೃತಿಯ ಮೇಲಿನ ಗೌರವವನ್ನು ಪ್ರತಿಬಿಂಬಿಸಿತು. ಈ ಸಂದರ್ಭದಲ್ಲಿ ಶ್ರೀಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ಮಠದ ಪ್ರಮುಖರು, ಸಿಬ್ಬಂದಿ ವರ್ಗದವರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.


