ಉಡುಪಿ: ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ವನಜಾ ಪೂಜಾರ್ತಿ (60) ಎಂಬವರನ್ನು ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಇವರಿಬ್ಬರು ಮದ್ಯಪಾನ ಮಾಡುತ್ತಿದ್ದರು.ಮಾರ್ಚ್ 9 ರಂದು ಸಂಜೆ 5 ಗಂಟೆಯಿಂದ ಮಾರ್ಚ್ 10 ರಂದು ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಅವರು ವನಜಾ ಪೂಜಾರ್ತಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2026 ಅಡಿಯಲ್ಲಿ ಕಲಂ 103 BNS ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ನಡೆದ ಸ್ಥಳಕ್ಕೆ ಕೆಎಂಸಿ ಮಣಿಪಾಲದ ಫೊರೆನ್ಸಿಕ್ ವೈದ್ಯರು, ಸೀನ್ ಆಫ್ ಕ್ರೈಂ ಆಫೀಸರ್ (SOCO) ತಂಡ, ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.


