ಮಂಗಳೂರು : ನಗರ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಧರ್ಮನಗರದ ಶ್ರೀಧರ್ ಎಂಬವರ ಮನೆಯ ಮಲಗುವ ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 32 ಪವನ್ ಗಿಂತಲೂ ಹೆಚ್ಚು ಸುಮಾರು 15 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಅಪ್ರಾಪ್ತರು ಸಹಿತ ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

*ಪ್ರಕರಣದ ವಿವರ :*
ದಿನಾಂಕ:08-06-2024 ರ ಬೆಳಿಗ್ಗೆ ಸುಮಾರು 08 ಗಂಟೆಯಿಂದ ದಿನಾಂಕ 16-06-2024 ರ ಮಧ್ಯಾಹ್ನ ಸುಮಾರು 12 ಗಂಟೆಯ ಮಧ್ಯದ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಮಾಲೀಕ ದೂರುದಾರ ಶ್ರೀಧರ್ ಅವರ ದೂರಿನನ್ವಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಲಂ: 380 ಭಾದಂಸಂ ಅಂತೆ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಯನ್ನು ಕೈಗೊಂಡ ಉಳ್ಳಾಲ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ರವರು ಅವರ ಸಿಬ್ಬಂದಿಯವರೊಂದಿಗೆ ಎ.ಸಿ.ಪಿ ದಕ್ಷಿಣ ಶ್ರೀಮತಿ ಧನ್ಯ ನಾಯಕ್ ರವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಪತ್ತೆ ಕಾರ್ಯದಲ್ಲಿ ತೊಡಗಿದ್ದು, ಇಬ್ಬರು ಬಾಲಕರು ಸೇರಿದಂತೆ ಆರೋಪಿಗಳಾದ ಬೆಳ್ತಂಗಡಿಯ ಶ್ರೇಯಸ್, ಪೃಥ್ವಿರಾಜ್ ಉರ್ವ, ಬೆಳ್ತಂಗಡಿಯ ತೌಸೀಫ್ ನನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಳವು ಮಾಡಿ ಮಂಗಳೂರು ನಗರದ ವಿವಿಧ ಚಿನ್ನಾಭರಣ ಅಂಗಡಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ಶ್ರೇಯಸ್(22) ಪೃಥ್ವಿರಾಜ್ ಉರ್ವ(24) ಮತ್ತು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ತೌಸೀಫ್ (22) ರವರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರಿಗೂ ಮಂಗಳೂರು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನಿಬ್ಬರು ಬಾಲಕರ ವಿರುದ್ಧ ಬಾಲ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
