ಸುರತ್ಕಲ್: ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ ಮಂಜೂರು ಮಾಡುವುದು, ಕಿದ್ವಾಯಿ, ಜಯದೇವ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ‘ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ವತಿಯಿಂದ ಸೋಮವಾರ ಗಂಜಿಮಠ ಜಂಕ್ಷನ್‌ನಲ್ಲಿ ಸಾಮೂಹಿಕ ಧರಣಿ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ರಾಜ್ಯ ಸರ್ಕಾರಕ್ಕೆ ಕಂಬಳದ ಕೋಣಗಳ ಮೇಲಿರುವ ಕಾಳಜಿ ಜಿಲ್ಲೆಯ ಜನಸಾಮಾನ್ಯರ ಆರೋಗ್ಯದ ಮೇಲಿಲ್ಲ ಎಂದು ಆರೋಪಿಸಿದರು. ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಮೂಲಕ ಕರಾವಳಿಯ ಜನರನ್ನು ಮರಳು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಹೋರಾಟ ಸಮಿತಿ ಸಂಚಾಲಕ ಸದಾಶಿವ ದಾಸ್ ಮಾತನಾಡಿ, ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳ ಕೊರತೆಯಿಂದ ಬಳಲುತ್ತಿವೆ. ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.


