ಮಂಗಳೂರು: “ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಸತತ ಏಳು ವರ್ಷಗಳಿಂದ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟ ನಡೆಸಿ, ತೆರವುಗೊಳಿಸುವಲ್ಲಿ ಶ್ರಮಿಸಿದ್ದ 101 ಸದಸ್ಯರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ನ್ಯಾಯಾಲಯದಿಂದ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಶನಿವಾರ ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು. ಮಾಜಿ ಕಾರ್ಪೊರೇಟರ್ ಪ್ರಜ್ವಲ್ ಕುಳಾಯಿ ತಮ್ಮ ಜಮೀನಿನ ದಾಖಲೆಯ ಮೂಲಕ ಜಾಮೀನು ಭದ್ರತೆ ಒದಗಿಸಿದರು. ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದಲ್ಲಿ ಚರಣ್ ಶೆಟ್ಟಿ ಪಂಜಿಮೊಗರು, ಅಶ್ವಿನಿ ಹೆಗ್ಡೆ, ನಿತಿನ್ ಕುತ್ತಾರ್, ಅನ್ನು ಮಲಿಕ್, ಮನೋಜ್ ವಾಮಂಜೂರು, ಹಸೈನಾರ್ ಗುರುಪುರ, ಶೆರ್ವಿನ್ ಸೊಲೊಮಾನ್ ಮೊದಲಾದ ಹೋರಾಟಗಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಹೋರಾಟಗಾರರ ಮೇಲೆ ಹಿಂದಿನ ಬಿಜೆಪಿ ಸರಕಾರ ಮೊಕದ್ದಮೆ ಹೂಡಿತ್ತು ಎನ್ನಲಾಗಿದೆ.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ, “ಹೋರಾಟದಲ್ಲಿ ವಿವಿಧ ಸಮಾನ ಮನಸ್ಕ ಪಕ್ಷದವರು ಭಾಗವಹಿಸಿದ್ದು, ಎಲ್ಲರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಹಿಂಪಡೆಯುವಂತೆ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ. ಉಸ್ತುವಾರಿ ಸಚಿವರ ಬಳಿಯೂ ಈ ವಿಚಾರದ ಕುರಿತು ಚರ್ಚಿಸಿದ್ದೇವೆ. ಪ್ರಕರಣದಲ್ಲಿ ಜಯ ಸಿಗುವ ವಿಶ್ವಾಸವಿದೆ,” ಎಂದು ತಿಳಿಸಿದರು.