ಉಪ್ಪಿನಂಗಡಿ: ಕಣ್ಣಿಗೆ ಬಟ್ಟೆ ಕಟ್ಟಿ ವ್ಯಕ್ತಿಯೋರ್ವ ನೇತ್ರಾವತಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗೇರುಕಟ್ಟೆಯ ಪರಪ್ಪು ನಿವಾಸಿಯಾದ ಮುತ್ತಪ್ಪ ಶೆಟ್ಟಿ ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.ಇಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಿಂದ ಉಪ್ಪಿನಂಗಡಿಗೆ ಕೆಎಸ್‌ಆರ್‌ಟಿಸಿ ಬಸ್ಸ್‌ನಲ್ಲಿ ಬಂದು ಇಳಿದು ಇವರು ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ನದಿಯ ಸೇತುವೆಯ ಮೇಲಿಂದ ನದಿಗೆ ಹಾರಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿಗಳಾದ ಸಯಾದ್, ಹಮ್ಜ, ರಶೀದ್ ಹಾಗು ಎಂಬವರು ತಕ್ಷಣವೇ ನದಿಗೆ ಹಾರಿ ಸುಮಾರು 100ಮೀ ದೂರದಲ್ಲಿ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸರಕಾರಿ ಆಸ್ಪತ್ರೆಗೆ ಆತನನ್ನು ತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಇವರ ಬಲಗಾಲಿನಲ್ಲಿ ಬ್ಯಾಂಡೇಜ್ ಇದ್ದು, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದ್ದು, ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.