ಮಂಗಳೂರು; ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕಳವಾರು ಗ್ರಾಮದ ಅಜರುದ್ದೀನ್ @ ಅಜರ್ @ ಅಜ್ಜು(29), ಉಡುಪಿಯ ಕಾಪುವಿನ ಬೆಳಪು ನಿವಾಸಿ, ಅಬ್ದುಲ್ ಖಾದರ್ @ ನೌಫಲ್(24), ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್(39) ಬಂಧಿತರು.
ಆರೋಪಿಗಳ ಪೈಕಿ ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿರುತ್ತಾನೆ. ಆರೋಪಿ ಅಬ್ದುಲ್ ಖಾದರ್ @ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು. ಇನ್ನೋರ್ವ ಆರೋಪಿ ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ. ಈತನು ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳ ಪೈಕಿ ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಆರೋಪಿಗಳಾದ ಅಬ್ದುಲ್ ಖಾದರ್ @ ನೌಫಲ್ ಮತ್ತು ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ ಎಂಬವರನ್ನು ಹೆಚ್ಚಿನ ತನಿಖೆ ಕುರಿತು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಈ ಕೊಲೆ ಪ್ರಕರಣದ ತನಿಖೆಯು ಮುಂದುವರಿದಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.