ಕನ್ನಡ ಚಿತ್ರರಂಗದಲ್ಲಿ ಇದೀಗ ಸುದ್ದಿ ಮಾಡುತ್ತಿರುವ ‘ಸು ಫ್ರಮ್ ಸೋ’ ಸಿನಿಮಾವು ಕಳೆದ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಕೆ ಮಾಡಿದೆ
ಜುಲೈ 25ರಂದು ಬಿಡುಗಡೆಯಾದ ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದೀಗ ಬಹು ದೊಡ್ಡ ಮೊತ್ತವನ್ನು ಲಾಭವಾಗಿ ಪಡೆದುಕೊಂಡಿದೆ.
ಮೊದಲ ದಿನ ರಾಜ್ಯಾದ್ಯಂತ ಚಿತ್ರ 88 ಲಕ್ಷ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಎರಡನೇ ದಿನ 2.17, ಮೂರನೇ ದಿನ 3.5, ನಾಲ್ಕನೇ ದಿನ 3.05 ಹಾಗೂ ಐದನೇ ದಿನ 3.88 ಕೋಟಿ ರೂ ಗಳಿಕೆ ಮಾಡಿರುವ ಸುದ್ದಿ ಇದೆ. ಒಟ್ಟಾರೆ ಚಿತ್ರವು ಐದು ದಿನಗಳಲ್ಲಿ 13 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಆಗಿದ್ದು, ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಿದ್ದ ಚಿತ್ರತಂಡ, ದೊಡ್ಡ ಲಾಭ ಪಡೆಯಲಿದೆ ಎಂದು ಹೇಳಲಾಗುತ್ತದೆ. ‘ಸು ಫ್ರಮ್ ಸೋ’ ಚಿತ್ರವು ಸದ್ಯ ಬೆಂಗಳೂರಿನಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿದೆ.
ಈ ಮಧ್ಯೆ, ಚಿತ್ರದ ಮಲಯಾಳಂ ಅವತರಣಿಕೆಯು ಆಗಸ್ಟ್ 01ರಂದು ಬಿಡುಗಡೆಯಾಗುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳು ಸಹ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಜನಪ್ರಿಯ ವಿತರಕ ಮತ್ತು ರವೀನಾ ಟಂಡನ್ ಗಂಡ ಅನಿಲ್ ಥಡಾನಿ, ಈ ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿಸಿದ್ದು, ಅದನ್ನು ಹಿಂದಿಗೆ ಡಬ್ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಜೆ.ಪಿ. ತುಮಿನಾಡು ನಿರ್ದೇಶನ ಮಾಡಿದ್ದು, ಲೈಟರ್ ಬುದ್ಧ ಫಿಲ್ಮ್ಸ್ ನಿರ್ಮಾಣ ಮಾಡಿದೆ.


