ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದಲ್ಲಿರುವ ಆಯ್ದ ನಲ್ವತ್ತು ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳಿಗೆ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಉಚಿತ ಸೋಲಾರ್ ಇನ್ವರ್ಟರ್ ಗಳನ್ನು ಅಳವಡಿಸುವ ಬಗ್ಗೆ ಸೋಮವಾರ ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಬೀಡಿನಲ್ಲಿ (ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಾರ್ಷಿಕ ನಿರ್ವಹಣಾ ಒಪ್ಪಂದ ಮಾಡಿಕೊಳ್ಳಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮತ್ತು ಸೋಶಿಯಲ್ ಅಲ್ಫಾದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಕುಮಾರ್ ಒಪ್ಪಂದ ಪತ್ರಗಳ ವಿನೀಮಯ ಮಾಡಿಕೊಂಡರು.
ಕರಾರಿನಂತೆ ಪ್ರತಿ ಘಟಕಕ್ಕೆ 6 ಲಕ್ಷ ರೂ. ವೆಚ್ಚದಂತೆ 40 ಶುದ್ಧಗಂಗಾ ಕುಡಿಯುವ ನೀರಿನ ಘಟಕಗಳಿಗೆ ಒಟ್ಟು, 2.40 ಕೋಟಿ ರೂ. ವೆಚ್ಚದೊಂದಿಗೆ ಒಂದು ವರ್ಷದವರೆಗೆ ನಿರ್ವಾಹಣೆಯನ್ನು ಸೆಲ್ಕೊ ಪ್ರತಿಷ್ಠಾನ ಉಚಿತವಾಗಿ ಮಾಡಲಿದೆ.
ಸಂಪೂರ್ಣ ಸೋಲಾರ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಡೆಸುವ ಹೊಸ ಪ್ರಯತ್ನ ಇದಾಗಿದ್ದು, ಮಾದರಿ ಕಾರ್ಯಕ್ರಮವಾಗಿದೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಿದ ಶುದ್ಧಗಂಗಾ ಯೋಜನೆ ಮಾದರಿ ಕಾರ್ಯಕ್ರಮವಾಗಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೂ ಸೌರಶಕ್ತಿಯ ಬಳಕೆ ಬಗ್ಗೆ ಅರಿವು, ಜಾಗೃತಿ ಮೂಡಿ ಬಂದಿದೆ. ವಿದ್ಯುತ್ ಉಳಿತಾಯದೊಂದಿಗೆ ಎಲ್ಲರಿಗೂ ನಿರಂತರ ಪರಿಶುದ್ಧ ಕಡಿಯುವ ನೀರು ಒದಗಿಸಲು ಅನುಕೂಲವಾಗಿದೆ ಎಂದು ಶ್ಲಾಘಿಸಿದರು.
ಮುಂದೆ ಅಡುಗೆ ಮನೆಯಲ್ಲಿಯೂ ಸೋಲಾರ್ ಬಳಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ ಮಾತನಾಡಿ,
ಸೋಲಾರ್ ಬಳಕೆ ಬಗ್ಗೆ ಧರ್ಮಸ್ಥಳದ ಸೇವೆ, ಸಾಧನೆ ಮತ್ತು ಯಶಸ್ಸನ್ನು ಶ್ಲಾಘಿಸಿ ಅಭಿನಂದಿಸಿದರು.
ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ 321 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ. ಎಲ್ಲರಿಗೂ ಕಡಿಮೆ ದರದಲ್ಲಿ ಶುದ್ಧ ನೀರು ಪೂರೈಸಲಾಗುತ್ತದೆ. ಪ್ರಸ್ತುತ ಸುಮಾರು 81,000 ಮಂದಿ ಬಳಕೆದಾರರು ಪ್ರತಿ ದಿನ 16,20,00 ಲೀಟರ್ ಶುದ್ಧ ನೀರನ್ನು ಘಟಕಗಳಿಂದ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಅಕ್ವಾಸಫಿ ಮತ್ತು ಆಕ್ವಾ ಶೈನ್ ಕಂಪೆನಿಗಳೊಂದಿಗೆ ವಾರ್ಷಿಕ ನಿರ್ವಹಣಾ ಒಪ್ಪಂದ ಮಾಡಿಕೊಂಡಿದ್ದು, ಗ್ರಾಮಾಭಿವೃದ್ಧಿ ಯೋಜನೆಯ 25 ಮಂದಿ ಮೇಲ್ವಿಚಾರಕರು ಹಾಗೂ 338 ಮಂದಿ ಪ್ರೇರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್.
ಎಸ್.ಎಸ್, ಪ್ರಾದೇಶಿಕ ಹಣಕಾಸು ನಿರ್ದೇಶಕರಾದ ಶಾಂತರಾಮ ಪೈ, ಸೆಲ್ಯೂ ಸೋಲಾರ್‌ನ ಸಿಇಓ
ಮೋಹನ ಭಾಸ್ಕರ ಹೆಗಡೆ, ಪ್ರಧಾನ ವ್ಯವಸ್ಥಾಪಕ ಜಗದೀಶ ಪೈ, ಸೆಲ್ಯೂ ಸೋಲಾರ್‌ನ ಗುರುಪ್ರಸಾದ್
ಶೆಟ್ಟಿ, ಸನ್ ಪ್ಲಸ್‌ನ ಸುಪ್ರಿಯಾ ಗೌಡ, ಶುದ್ಧಗಂಗಾ ವಿಭಾಗದ ನಿರ್ದೇಶಕ ಲಕ್ಷ್ಮಣ ಎಂ. ಮತ್ತು
ಯೋಜನಾಧಿಕಾರಿ ಯುವರಾಜ ಜೈನ್ ಉಪಸ್ಥಿತರಿದ್ದರು.ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಧನ್ಯವಾದವಿತ್ತರು.