ಬೆಂಗಳೂರು : ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ ಇದೀಗ ಮಾಜಿ ಸಿದ್ದರಾಮಯ್ಯ ಅವರಿಗೂ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ.
ಮೂತ್ರಕೋಶದ ಸೋಂಕಿನಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಕೋವಿಡ್ ಟೆಸ್ಟ್ ಕೂಡ ಮಾಡಲಾಗಿತ್ತು. ಇದೀಗ ವರದಿ ಬಂದಿದ್ದು ಅದರಲ್ಲಿ ಕೊರೊನಾ ಇರೋದು ದೃಢವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಹಾಗೇ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
“ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


