ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಮಂಗಳಡ್ಕ ಎಂಬಲ್ಲಿ ನಡೆದಿದೆ.
ಜಯಂತಿ ಎಂಬುವವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಮಂಗಳವಾರದಂದು ಸಂಜೆ ಊಟ ಮುಗಿಸಿ ಮನೆಗೆ ಬೀಗ ಹಾಕಿ, ಹತ್ತಿರದ್ದಲ್ಲಿದ್ದ ಅಣ್ಣನ ಮನೆಗೆ ಹೋಗಿ, ಮರುದಿನ ಬೆಳಿಗ್ಗೆ ಮನೆಗೆ ಬಂದಾಗ ಬಾಗಿಲು ಅರ್ಧ ತೆರೆದಿರುವುದು ಬೆಳಕಿಗೆ ಬಂದಿದೆ.
ಮನೆಯ ಒಳೆಗೆ ಹೋಗಿ ನೋಡಿದಾಗ ಮನೆಯ ಮಧ್ಯದ ರೂಂನಲ್ಲಿದ್ದ ಕಬ್ಬಿಣದ ಗಾಡ್ರೇಜನ್ನು ಒಡೆದು ಅದರೊಳಗೆ ಇಟ್ಟಿದ್ದ ಬಟ್ಟೆ ಬರೆಗಳನ್ನು ಹೊರಗೆಳೆದು ಹಾಕಿದ್ದಾರೆ. ಇನ್ನೊಂದು ಬೆಡ್ ರೂಮಿನಲ್ಲಿದ್ದ ಕಪಾಟನ್ನು ಯಾವುದೋ ಆಯುಧದಿಂದ ಒಡೆದು, ಅದರೊಳಗೆ ಇಟ್ಟಿದ್ದ ಪರ್ಸ್ ನಲ್ಲಿ ಸುಮಾರು 3 ½ ಪವನ್ ಅಂದರೆ ಸುಮಾರು 28 ಗ್ರಾಂ ತೂಕದ ವೆಂಕಟರಮಣ ದೇವರ ಪೆಂಡೆಂಟ್ ಇರುವ ಚಿನ್ನದ ಚೈನ್ ಮತ್ತು 6,000 ರೂ ನಗದು ಹಣವನ್ನು ಕಳವು ಮಾಡಲಾಗಿದೆ.
ಒಟ್ಟು 1,00,000 ರೂ ಮೌಲ್ಯದ ಚಿನ್ನ ಹಾಗೂ ಹಣ ಕಳವಾಗಿದ್ದು, ಸದ್ಯ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.