
ಮೂಡುಬಿದಿರೆ: ಇಲ್ಲಿನ ರತನ್ ಗ್ಯಾರೇಜ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಾವೀರ ಕಾಲೇಜು ಬಳಿಯ ವೇಣುಗೋಪಾಲ ಕಾಲೋನಿ ನಿವಾಸಿ, ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ (64) ಅವರು ಮೃತರಾಗಿದ್ದಾರೆ.
ಇವರು ‘ಜಿ.ಕೆ. ಮಾಸ್ಟ್ರು’ ಎಂದೇ ಚಿರಪರಿಚಿತರಾಗಿದ್ದರು. ಬುಧವಾರ ಸಂಜೆ ಜಿ.ಕೆ. ಭಟ್ ಅವರು ತಮ್ಮ ಮನೆಯಿಂದ ಮೂಡುಬಿದಿರೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಡಬದಿಯ ರಸ್ತೆಯಿಂದ ಬಂದ ದ್ವಿಚಕ್ರ ವಾಹನವೊಂದು ವೇಗವಾಗಿ ಆಟೋಗೆ ಢಿಕ್ಕಿ ಹೊಡೆಯಲು ಬಂದಿದೆ. ಇದನ್ನು ಗಮನಿಸಿದ ಆಟೋ ಚಾಲಕ ತಕ್ಷಣವೇ ರಿಕ್ಷಾವನ್ನು ಬಲಬದಿಗೆ ತಿರುಗಿಸಿದ್ದಾನೆ.
ಆಗ ಚಾಲಕನ ನಿಯಂತ್ರಣ ತಪ್ಪಿದ ಆಟೋದಿಂದ ಜಿ.ಕೆ. ಭಟ್ ಅವರು ಹೊರಗೆ ಬಿದ್ದಿದ್ದು, ರಿಕ್ಷಾ ನೇರವಾಗಿ ಅವರ ಮೇಲೆಯೇ ಮಗುಚಿ ಬಿದ್ದಿದೆ. ಪರಿಣಾಮವಾಗಿ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದ ಜಿ.ಕೆ. ಭಟ್ ಅವರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರು ವಂದೇಮಾತರಂ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್ನ ಸಕ್ರಿಯ ಸದಸ್ಯರಾಗಿದ್ದರು.
ಮೃತರು ಪತ್ನಿ ನಿವೃತ್ತ ಶಿಕ್ಷಕಿ ವಸಂತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ


