ಉಡುಪಿ/ಸುಬ್ರಹ್ಮಣ್ಯ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ತರಬೇತುದಾರ ರವಿಶಾಸ್ತ್ರಿ ಅವರು ಬುಧವಾರ ಉಡುಪಿಯ ಶ್ರೀ ಕೃಷ್ಣ ಮಠ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಉಡುಪಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದ ರವಿಶಾಸ್ತ್ರಿ, ಪರ್ಯಾಯ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಪರ್ಯಾಯ ಶ್ರೀಗಳು ರವಿಶಾಸ್ತ್ರಿ ಅವರಿಗೆ ಶೇಷ ವಸ್ತ್ರ ಹೊದಿಸಿ ಗೌರವಿಸಿದರು.
ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಶ್ರೀಗಳು ಅವರಿಗೆ ಶಾಲು ಹೊದಿಸಿ, ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನ ಲಾತವ್ಯ ಆಚಾರ್, ದೇವಳದ ಅಧೀಕ್ಷಕ K.M. ಗೋಪಿನಾಥ್ ನಂಬೀಶ ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು. ರವಿಶಾಸ್ತ್ರಿ ಅವರು ಪ್ರತಿವರ್ಷವೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾ ಬಂದಿದ್ದಾರೆ.


