ಮಂಗಳೂರು: ಕೇಂದ್ರ ಸರ್ಕಾರದ ಹೊಸ ಅಡಿಕೆ ಆಮದು ನೀತಿಯು ಕರಾವಳಿ ಭಾಗದ ಬಹುಪಾಲು ಕೃಷಿಕರಿಗೆ ದೊಡ್ಡ ಹೊಡೆತವಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುಪಾಲು ಕೃಷಿಕರು ಅಡಿಕೆಯನ್ನೇ ತನ್ನ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ ಬದಲಾವಣೆಗಳಾದರೂ, ಅದು ನೇರವಾಗಿ ಅಡಿಕೆ ಬೆಳೆಗಾರನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ ಕರಾವಳಿಗರ ಬಹುತೇಕ ವಹಿವಾಟುಗಳಲ್ಲಿ ಅಡಿಕೆಯ ಪಾತ್ರವೂ ಪ್ರಮುಖವಾಗಿದೆ ಎಂದರು.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು, “ರೈತರು ಅಡಿಕೆ ಕೃಷಿಯಲ್ಲಿ ವಿವಿಧ ರೋಗಗಳಿಂದ ಹಲವಾರು ವರ್ಷಗಳ ಕಾಲ ಕಂಗೆಟ್ಟಿದ್ದು, ಈಗ ಕೇಂದ್ರ ಸರಕಾರ ಅವರಿಗೆ ನೆರವಾಗುವ ಬದಲಾಗಿ ವಿದೇಶಿ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬೀಳುವಂತೆ ಮಾಡಿದ್ದಾರೆ.
ಇನ್ನು ಇಂತಹ ಆಮದು ನೀತಿಯನ್ನು ಕರಾವಳಿ ಸಂಸದರು ಕೇಂದ್ರ ಸರ್ಕಾರವನ್ನು ಪ್ರಶ್ನಿಸದಿರುವುದು ದೊಡ್ಡ ದುರಂತ. ಅಡಿಕೆಯನ್ನು ಬೇಕಾಬಿಟ್ಟಿಯಾಗಿ ಶ್ರೀಲಂಕಾ , ಭೂತಾನ್ , ಮ್ಯಾನ್ಮಾರ್, ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು, ಇಂತಹ ಹೊಸ ಯೋಜನೆ ಬಿಜೆಪಿ ಪಕ್ಷದ ರೈತಪರ ನೀತಿಯೇ? ಅಡಿಕೆಯನ್ನು ಯಥೇಚ್ಛವಾಗಿ ನಮ್ಮಲ್ಲಿ ಬೆಳೆಯುತ್ತಿದ್ದರೂ ವಿದೇಶದಿಂದ ಆಮದು ಮಾಡಿಕೊಳ್ಳುವ ಅಗತ್ಯ ಏನಿದೆ? ಎಂದು ರಕ್ಷಿತ್ ಶಿವರಾಂ ಪ್ರಶ್ನಿಸಿದರು.