ಬೆಳ್ತಂಗಡಿ ಧರ್ಮಸ್ಥಳ 8 ವಾರ್ಡ್ ಗಳನ್ನು ಹೊಂದಿದ್ದು 7083 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 1150 ಎಕ್ರೆ ಕೃಷಿ ಭೂಮಿಯನ್ನು ಹೊಂದಿದ್ದು, ಮಂಡಲ ಪಂಚಾಯತ್ ನಿಂದ ಆರಂಭಿಸಿ ಗ್ರಾಮದ ಅಭಿವೃದ್ಧಿ ಜನಗಳಿಗೆ ಮುಟ್ಟುವ ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಪಾರದರ್ಶಕವಾಗಿ ಪರಿಣಾಮಕಾರಿಯಾಗಿ ಮಾಡಿದ್ದೇವೆ ಎಂದು ಜುಲೈ 9 ರಂದು ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ಕೈಗೊಂಡಿದ್ದೇವೆ. ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಗ್ರಾ.ಪಂ. ಮಾಡುವ ನೆಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅ.2 ರಂದು 2013 ರಲ್ಲಿ ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಏಕಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿದ ಮೂಲಕ ನಿರಂತರ ಕೆಲಸ ಮಾಡುತ್ತಾ ಬಂದಿದ್ದೇವೆ. ಗ್ರಾಮದಲ್ಲಿ 9818 ಜನಸಂಖ್ಯೆ ಹೊಂದಿದ್ದು, 2858 ಕುಟುಂಬಗಳಿವೆ. 2518 ವಾಸ್ತವ್ಯ ಮನೆಗಳಿದ್ದು 484 ವಾಣಿಜ್ಯ ಕಟ್ಟಡಗಳಿವೆ. ಗ್ರಾ.ಪಂ. ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಹೀ ಸೇವಾ, ಡಾಕ್ಟರ್ ಶಿವರಾಮ ಕಾರಂತ ಪ್ರಶಸ್ತಿ ಪಡೆದಿದೆ. ತೆರಿಗೆ ಸಂಗ್ರಹದಲ್ಲಿ ದ.ಕ.ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಟ್ಟು 1.55 ಕೋ.ರೂ. ತೆರಿಗೆಯಲ್ಲಿ 1.06 ಕೋ.ರೂ. ಸಂಗ್ರಹಿಸಲಾಗಿದೆ.
ಕೇಂದ್ರ ಸರಕಾರದ 15 ನೇ ಹಣಕಾಸು ಯೋಜನೆಯಡಿ 1.18 ಕೋ.ರೂ. ಬಂದಿದೆ. ಪಂಚಾಯತ್ ನಿಧಿಯಡಿ 4.77 ಕೋ.ರೂ. ಕಾಮಗಾರಿ ನಡೆಸಲಾಗಿದೆ. 273 ಮಂದಿ ಒಟ್ಟು ಅರ್ಹ ನಿವೇಶನ ರಹಿತರಿದ್ದಾರೆ. ರಸ್ತೆ ಕಾಂಕ್ರೀಟ್, ತಡೆಗೋಡೆ, ಕಟ್ಟಡ ನಿರ್ಮಾಣ, ನೀರು ನಿರ್ವಹಣೆ, ಮೋರಿ ರಚನೆ ಸಹಿತ 6.75 ಕೋ.ರೂ. ವ್ಯಯಿಸಲಾಗಿದೆ. ರಾಜ್ಯಸಭಾ ನಿಧಿಯಡಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಶೋಕನಗರ ಹಾಗೂ ಮುಳಿಕ್ಕಾರಿಗೆ 2.50 ಕೋ.ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು. ಗ್ರಾ.ಪಂ. ಉಪಾಧ್ಯಕ್ಷ ವಿಮಲಾ, ಪಿಡಿಒ ದಿನೇಶ್ ಎಂ., ಲೆಕ್ಕ ಸಹಾಯಕಿ ಪ್ರಮಿಳಾ, ಸದಸ್ಯೆ ಸುನಿತಾ, ವಸಂತ, ಹರ್ಷಿತ್ ಜೈನ್, ಹರೀಶ್, ಮುರಳೀದಾಸ್, ಸಿಬ್ಬಂದಿ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.