
ಉಡುಪಿ: ರಾಜ್ಯದ ರಾಜಧಾನಿ ಬೆಂಗಳೂರನ್ನು ಕರಾವಳಿಯ ಮಂಗಳೂರು, ಉಡುಪಿ ಮತ್ತು ಕಾರವಾರ ಮೂಲಕ ಗೋವಾದ ಮಡಗಾಂವ್‌ಗೆ ಸಂಪರ್ಕಿಸುವ ಬಹುನಿರೀಕ್ಷಿತ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ನವೆಂಬರ್ 13ರಂದು ಚಾಲನೆ ಸಿಗಲಿದೆ.
ಬೆಂಗಳೂರಿನಲ್ಲಿ ನಡೆಯುವ ಅಧಿಕೃತ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಅಪರಾಹ್ನ 2 ಗಂಟೆಗೆ ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದೊಂದು ವರ್ಷದಿಂದ ಮಡಗಾಂವ್ ಹಾಗೂ ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲು ಸೇವೆಯನ್ನು ಈಗ ಬೆಂಗಳೂರಿನವರೆಗೆ ವಿಸ್ತರಿಸಲಾಗಿದ್ದು, ಇನ್ಮುಂದೆ ಈ ರೈಲು ಮಡಗಾಂವ್-ಬೆಂಗಳೂರು ನಡುವೆ ಪೂರ್ಣಪ್ರಮಾಣದಲ್ಲಿ ಸಂಚರಿಸಲಿದೆ ಎಂದಿದ್ದಾರೆ.
ಅದೇ ಸಮಯದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿಯೂ ಸರಳ ಸಮಾರಂಭ ಆಯೋಜಿಸಲಾಗಿದ್ದು, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕರಾವಳಿಯ ಸಂಸದರ ಉಪಸ್ಥಿತಿಯಲ್ಲಿ ಸಾಂಕೇತಿಕ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಯ ಬಳಿಕ, ನವೆಂಬರ್ 15ರಿಂದ ಬೆಂಗಳೂರು ಮತ್ತು ಮಡಗಾಂವ್ ಎರಡೂ ಕಡೆಯಿಂದ ಈ ರೈಲಿನ ನಿಯಮಿತ ಸಂಚಾರ ಸಾರ್ವಜನಿಕರಿಗೆ ಲಭ್ಯವಾಗಲಿದೆ.


