ಮುನ್ನೂರು: ಹೆಣ್ಣು ಮಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯನ್ನು ಪಂಚಾಯತ್ ಅಧ್ಯಕ್ಷರ ಕಛೇರಿಗೆ ಮನವಿಕೊಡುವ ನೆಪದಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅನೈತಿಕವಾಗಿ ನಡೆದುಕೊಂಡ ಆರೋಪಿ ಕೇಳಿ ಬಂದಿದ್ದು, ಡಿವೈಎಫ್‌ಐ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ದೂರು ನೀಡಲಾಗಿದೆ.
ಎರಡು ಬಾರಿ ‘ಗಾಂಧಿ ಗ್ರಾಮ’ ಹೆಗ್ಗಳಿಕೆಗೆ ಪಾತ್ರವಾದ ಮುನ್ನೂರು ಗ್ರಾಮ ಪಂಚಾಯತ್ ರಾಜ್ಯದಲ್ಲಿ ಹೆಸರನ್ನು ಪಡೆದುಕೊಂಡಿರುವ ಗ್ರಾಮ ಪಂಚಾಯತ್‌ಗಳಲ್ಲಿ ಒಂದು. ಇದಕ್ಕೆ ಮಸಿ ಬಳಿಯುವ ಕೆಲಸವು ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಬಾಬು ಶೆಟ್ಟಿಯು ನಿವೇಶನರಹಿತ ಬಡ ಮಹಿಳೆಯೊಬ್ಬಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯನ್ನು ಪಂಚಾಯತ್ ಅಧ್ಯಕ್ಷರ ಕಛೇರಿಗೆ ಮನವಿಕೊಡುವ ನೆಪದಲ್ಲಿ ಕರೆಸಿ ಆಕೆಯೊಂದಿಗೆ ಅನೈತಿಕವಾಗಿ ನಡೆದುಕೊಂಡಿರುವ ವಿಚಾರ ಸುದ್ದಿಯಾಗಿತ್ತು. ಅಲ್ಲದೆ ತನ್ನ ವಿಕೃತ ಕಾಮದಾಹ ತೀರಿಸಿಕೊಳ್ಳಲು ಅಧ್ಯಕ್ಷರ ಕಛೇರಿಯನ್ನೇ ಬಳಿಸಿರುವುದು ಪಂಚಾಯತ್ ಸದಸ್ಯ ಮಾಡುವ ಅವಮಾನವಾಗಿದೆ.
ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನಾದ ಬಾಬು ಶೆಟ್ಟಿ ವಿರುದ್ಧ ಸರಿಯಾದ ಕ್ರಮ ಜರುಗಿಸಲು ಒತ್ತಾಯಿಸಿ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಡ್ ಡಿ’ಸೋಜ ಅವರಿಗೆ ಡಿವೈಎಫ್‌ಐ ಮುನ್ನೂರು ಗ್ರಾಮ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಇಲ್ಲದಿದ್ದರೆ ಪ್ರತಿಭಟನೆಯ ಮಾಡುವ ಎಚ್ಚರಿಕೆಯನ್ನು ನೀಡಲಾಯಿತು.
ಈ ನಿಯೋಗದಲ್ಲಿ ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ, ಗ್ರಾಮ ಸಮಿತಿಯ ಕಾರ್ಯದರ್ಶಿ ಕಾರ್ತಿಕ್ ದೇಸೋಡಿ, ಅಧ್ಯಕ್ಷರಾದ ನಿತಿನ್ ಕುತ್ತಾರ್ ಮುಖಂಡರಾದ ಧನಂಜಯ್ ದೆಪ್ಪಲಿಮಾರ್, ದಿವ್ಯರಾಜ್ ತೇವುಲ, ದೀಕ್ಷಿತ್ ಕಂಪ ಉಪಸ್ಥಿತರಿದ್ದರು.


