ಪೇಶಾವರ: ವಾಯುವ್ಯ ಪಾಕಿಸ್ತಾನದ ಬಸ್ಸಿನಲ್ಲಿ ಬಾಂಬ್ ಸ್ಪೋಟಗೊಂಡ ಪರಿಣಾಮ ಒಂಬತ್ತು ಮಂದಿ ಚೀನ ಕಾರ್ಮಿಕರು ಸೇರಿದಂತೆ 13 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಇಸ್ಲಾಮಾಬಾದ್ ನಲ್ಲಿರುವ ಚೀನಾದ ರಾಯಭಾರ ಕಚೇರಿ ತಮ್ಮ ಪ್ರಜೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

28 ಚೀನಾದ ಪ್ರಜೆಗಳು ಗಾಯಗೊಂಡಿದ್ದು, ಈ ದಾಳಿಯಿಂದ ಪಾಕಿಸ್ತಾನದಲ್ಲಿನ ಚೀನಾ ಸಂಸ್ಥೆಯ ಯೋಜನೆಗೆ ಅಡ್ಡಿಯನ್ನು ಉಂಟು ಮಾಡುವ ಇರಾದೆಯಾಗಿದೆ. ಇದರಿಂದ ಚೀನಾದ ಪ್ರಜೆಗಳು ಸಾವಿಗೀಡಾಗಲು ಕಾರಣವಾಗಿದೆ ಎಂದು ಚೀನಾ ರಾಯಭಾರ ಕಚೇರಿ ಬುಧವಾರ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ ಸಂಸ್ಥೆಗಳಿಗೆ ಭದ್ರತೆಯನ್ನು ಬಲಪಡಿಸುವಂತೆ ಹಾಗೂ ದಾಳಿಕೋರರನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದೆ.
ದಾಳಿಯನ್ನು ಖಂಡಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಜ್ಹಾವ್ ಲಿಜಿಯನ್ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ದೇಶದಲ್ಲಿ ಚೀನಾದ ಪ್ರಜೆಗಳು, ಸಂಸ್ಥೆಗಳು ಮತ್ತು ಯೋಜನೆಗಳ ಸುರಕ್ಷತೆಯನ್ನು ಶ್ರದ್ಧೆಯಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.