- Advertisement -
- Advertisement -
ಕಾರ್ಕಳ : ಹಾಡಹಗಲೇ ಮಂಕು ಬೂದಿ ಎರಚಿ ಅಪರಿಚಿತ ವೃದ್ಧೆಯ ಸರ ದೋಚಿದ ಘಟನೆ ಕಾರ್ಕಳ ಪೇಟೆಯಲ್ಲಿ ನಡೆದಿದೆ. ಸುಶೀಲ(77) ಸರ ಕಳೆದುಕೊಂಡ ವೃದ್ಧೆ.
ಸುಶೀಲ ಅವರು ಕಾರ್ಕಳ ಬಸ್‌ಸ್ಟ್ಯಾಂಡ್ ಬಳಿಯಿರುವ ಕ್ಲಿನಿಕ್‌ಗೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಮ್ಮ ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ಫೊನ್ ತೆಗೆದುಕೊಂಡು ಮಾತನಾಡಿದಂತೆ ಮಾಡಿ ಮಗ ಫೋನ್ ತೆಗೆಯುತ್ತಿಲ್ಲ ಎಂದು ಹೇಳಿ ಮೊಬೈಲ್ ಫೋನ್ ತೆಗೆದುಕೊಂಡು ಮುಂದಕ್ಕೆ ಹೋಗಿದ್ದಾನೆ. ಮಹಿಳೆ ಅವನನ್ನು ಹಿಂಬಾಲಿಸಿದಾಗ ಅವನು ಮಾರ್ಕೆಟ್ ರಸ್ತೆ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಒಂದು ಅಂಗಡಿಯ ಮೆಟ್ಟಿಲಿನಲ್ಲಿ ಮಹಿಳೆಯನ್ನು ಕುಳ್ಳಿರಿಸಿ 500 ರೂ. ಕೊಡಿ ಈಗ ಕೊಡುತ್ತೇನೆಂದು ಹೇಳಿ ಪರ್ಸಿನಿಂದ 700 ರೂ. ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಹೋಗಿದ್ದಾನೆ. ಸ್ವಲ್ಪಹೊತ್ತಿನಲ್ಲಿ ವಾಪಸು ಬಂದು ನಿಮ್ಮ ಚೈನ್ ಕೊಡಿ ನನ್ನ ತಾಯಿಗೆ ಅದೇ ರೀತಿಯ ಚೈನ್ ಮಾಡಿಸಲಿಕ್ಕಿದೆ ಎಂದು ಹೇಳಿ ಒಂದೂವರೆ ಪವನ್ ತೂಕದ ಹವಳದ ಚಿನ್ನದ ಸರವನ್ನು ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಓಡಿ ಹೋಗಿದ್ದಾನೆ. ಮೊಬೈಲ್ ಫೋನ್, ನಗದು ರೂಪಾಯಿ 700 ರೂ. ಮತ್ತು 30,000 ರೂ. ಮೌಲ್ಯದ ಹವಳ ಅಳವಡಿಸಿದ ಚಿನ್ನದ ಸರ ಮಹಿಳೆ ಕಳೆದುಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -