ಪುತ್ತೂರು: ಕೊರೊನ ಖಾಯಿಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 550 ಪ ಜಾತಿ – ಪ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಮುಂಡೂರು ಗ್ರಾಮ ಪಂಚಾಯತ್ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ ಎಸ್ ಡಿ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಮುಂಡೂರು ಗ್ರಾಮ ಪಂಚಾಯತ್ ನಿರಂತರವಾಗಿ ಸಾರ್ವಜನಿಕರ ಜೊತೆ ಸಂಪರ್ಕದಲ್ಲಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ. ಕೋವಿಡ್ 19 ಗ್ರಾಮೀಣ ಕಾರ್ಯಪಡೆಯ ಸಭೆಗಳನ್ನು ನಿಯಮಿತವಾಗಿ ನಡೆಸಿ ಜನ ಜೀವನದ ಬಗ್ಗೆ, ಸಾರ್ವಜನಿಕರ ಬೇಡಿಕೆಗಳ ಬಗ್ಗೆ ಅವಲೋಕನ ನಡೆಸಲಾಗುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯತ್ ಸದಸ್ಯರು, ಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಈ ನಿಟ್ಟಿನಲ್ಲಿ ಸಕ್ರಿಯರಾಗಿದ್ದು ದಿನಸಿ ಸಾಮಗ್ರಿಗಳನ್ನು ನೀಡಲು ಪ ಜಾತಿ -ಪ ಪಂಗಡಕ್ಕೆ ಮೀಸಲಾದ ಶೇ 25 ರ ನಿಧಿಯನ್ನು ಬಳಸಿಕೊಳ್ಳಲಾಗಿದೆ ಎಂದರು.
ಸರ್ವೆ ಗ್ರಾಮದ ಕಲ್ಲಗುಡ್ಡೆ, ಭಕ್ತಕೋಡಿ, ಪಾಲೆತ್ತಗುರಿ, ಸರ್ವೆ, ಸೊರಕೆ, ಪರಂಟೊಲು, ಕಟ್ಟತ್ತಡ್ಕ, ನೇರೋಳ್ತಡ್ಕ, ನೆಕ್ಕಿಲು, ತಿಂಗಳಾಡಿ, ಮುಂಡೂರು ಗ್ರಾಮದ ಅಂಬಟ, ಕರಿಯಂಡಗೋಳಿ, ಕಂಪ, ಕುರೆಮಜಲು, ಪುತ್ತಿಲ, ಕೆಮ್ಮಿಂಜೆ ಗ್ರಾಮದ ನೈತಾಡಿ, ಕಲ್ಲಗುಡ್ಡೆ, ಕೊರುಂಗು ಕೊಲೊನಿಗಳಿಗೆ ಭೇಟಿ ನೀಡಿ ದಿನಸಿ ಸಾಮಗ್ರಿಗಳನ್ನು ಮನೆ ಮನೆಗಳಿಗೆ ವಿತರಿಸಿ ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಪಂ ಅಭಿವೃದ್ಧಿ ಅಧಿಕಾರಿ, ಗ್ರಾಮ ಕರಣಿಕರು, ವಿವಿಧ ಸಂಘಟನೆಗಳ ಸ್ವಯಂ ಸೇವಕರು ಸಹಕರಿಸಿದರು.