ಶಿರ್ವ: ಕೊಲ್ಲಬೆಟ್ಟು ಬಳಿಯ ನಿವಾಸಿ ರಮೇಶ್ ಮೂಲ್ಯ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೀಗ ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡು ಕೋಮಾಕ್ಕೆ ತೆರಳಿದ್ದ ತಾಯಿಯೂ 26 ರ ಬುಧವಾರದಂದು ಮೃತಪಟ್ಟಿದ್ದಾರೆ.
ಸಾವನ್ನಪ್ಪಿದವರು ಇಂದಿರಾ ಮೂಲ್ಯ (74).
ಬಂಟಕಲ್ಲಿನಿಂದ ಬಿ ಸಿ ರೋಡ್-ಪಾಂಬೂರು ಮಾರ್ಗವಾಗಿ ಮಾ.23 ರಂದು ತೆರಳುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಪಾಂಬೂರು ಬಳಿ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ರಮೇಶ್ ಮೂಲ್ಯ ಅವರನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾ.24 ರಂದು ರಾತ್ರಿ ಮೃತಪಟ್ಟರು. ಇವರ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಶಿರ್ವ ಕೊಲ್ಲಬೆಟ್ಟುವಿನ ಮನೆಗೆ ತರಲಾಗಿತ್ತು. ರಮೇಶ್ ಮೂಲ್ಯ ಅವರ ತಾಯಿಗೆ ಪುತ್ರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ತಾಯಿ ಇಂದಿರಾ ಮೂಲ್ಯ (74) ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ತೆರಳಿದ್ದು, ಮಂಗಳವಾರ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಇಂದಿರಾ ಮೂಲ್ಯ ಅವರು ಮೃತಪಟ್ಟಿದ್ದಾರೆ.