ಪುತ್ತೂರು:ದಿನಸಿ ಅಂಗಡಿಯಲ್ಲಿಟ್ಟಿದ್ದ ನಗದು ಕಳವು ಮಾಡಿರುವ ಘಟನೆ ಕಲ್ಲಾರೆ ಸಮೀಪದ ಸಚಿನ್ ಟ್ರೇಡರ್ ಹೋಲ್‌ಸೇಲ್ ಗ್ರೋಸರಿ ಅಂಗಡಿಯಲ್ಲಿ ನಡೆದಿದೆ.
ಸಚಿನ್ ಟ್ರೇಡರ್ನ ಮಾಲಕಿ ವಿದ್ಯಾ ನಾಯಕ್ ಮತ್ತು ಮಂಜುನಾಥ್ ನಾಯಕ್ ಅವರು ಅಂಗಡಿಯ ವ್ಯವಹಾರ ನೋಡಿಕೊಳ್ಳುತ್ತಿದ್ದು, ಸೆ.4ರಂದು ಮಂಜುನಾಥ್ ನಾಯಕ್ ಅವರು ಲೆಕ್ಕ ಮಾಡಿಟ್ಟ 2,15,000 ರೂ. ನಗದನ್ನು ಪೇಪರ್‌ನಲ್ಲಿ ಕಟ್ಟಿ ಡ್ರಾವರ್ ಪಕ್ಕದಲ್ಲಿ ಇಟ್ಟಿದ್ದರು. ಆದರೆ ಅವರು ಮರೆತು ನಗದನ್ನು ಅಲ್ಲೇ ಬಿಟ್ಟಿದ್ದರು. ಎರಡು ದಿನಗಳ ಬಳಿಕ ಅವರಿಗೆ ತಾನಿಟ್ಟ ಹಣದ ನೆನಪಾಗಿ ಡ್ರಾವರ್ ಪಕ್ಕ ನೋಡಿದಾಗ ನಗದು ಕಾಣೆಯಾಗಿತ್ತು.
ಈ ಕುರಿತು ಅವರು ಅಂಗಡಿಯ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಸೆ. 4ರ ರಾತ್ರಿ ಸಮಯ ಓರ್ವ ವ್ಯಕ್ತಿ ಅಂಗಡಿಯ ಹಿಂಬದಿಯ ಕ್ಯಾಂಟೀನ್ ಗೋಡೆ ಹತ್ತಿ ವೆಂಟಿಲೇಟರ್ ಮೂಲಕ ಒಳಪ್ರವೇಶಿಸಿ ಅಂಗಡಿಯ ಒಳಗೆ ಬಂದು ಡ್ರಾವರ್ ಪಕ್ಕದಲ್ಲಿದ್ದ ಹಣದ ಕಟ್ಟನ್ನು ಕದ್ದು ಹೋಗುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಅಂಗಡಿಯ ಮಾಲೀಕರು ಸೆ. 7ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕೆಮೆರಾ ಪರಿಶೀಲಿಸಿದಾಗ ಅಂಗಡಿಯ ಕೆಲಸದಾಳು ಚೇತನ್ ಕುಮಾರ್ ಈ ಕೃತ್ಯ ಎಸಗಿರುವ ಅನುಮಾನ ಇದೆ ಎಂದು ಅಂಗಡಿಯ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.