ಬೆಳಗಾವಿ: ಸಸಿಹಿತ್ಲು ನಲ್ಲಿ ಸರ್ಫಿಂಗ್ ನಂತಹ ಸಾಹಸ ಕ್ರೀಡೆಯ ಉತ್ತೇಜನಕ್ಕೆ ಸರ್ಕಾರ ಮುಂದಾಗಬೇಕು ಮತ್ತು ಸಸಿಹಿತ್ಲು ಪ್ರದೇಶದಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಜ್ಯ ಸರ್ಕಾರವನ್ನು ಶಾಸಕ ಕೋಟ್ಯಾನ್ ಒತ್ತಾಯಿಸಿದ್ದಾರೆ.
ಶಾಸಕರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ಜೈನ ಕಾಶಿ ಮೂಡಬಿದರೆಯ ಯಾತ್ರಿ ನಿವಾಸಕ್ಕೆ 15 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ 70 ಲಕ್ಷ ರೂಪಾಯಿ ಮಂಜೂರಾಗಿದ್ದು, ಸರ್ಕಾರದಿಂದ 52.50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಸಸಿಹಿತ್ಲು ಅಭಿವೃದ್ದಿ ಕಾಮಗಾರಿಗೆ 25 ಲಕ್ಷ ರೂಪಾಯಿ ಮೀಸಲಿರಿಸಿದ್ದು, ಆದ್ಯತೆಯ ಮೇರೆಗೆ ಶೀಘ್ರವೇ ಕೈಗೆತ್ತಿಕೊಂಡು ಕಾಮಗಾರಿ ಆರಂಭಿಸಲಾಗುವುದು ಹೇಳಿದ್ದಾರೆ.
ಇದೇ ವೇಳೆ ಮೂಡಬಿದರೆ ಕ್ಷೇತ್ರದ ಕಲಕಕೆರೆ ನಿಸರ್ಗಧಾಮ ಮತ್ತು ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮಕ್ಕೆ 1 ಕೋಟಿ ರೂ., ಶಿರ್ತಾಡಿ ಗ್ರಾಮದ ಪ್ರವಾಸಿ ತಾಣ ಕೊಣಾಜೆಕಲ್ಲು ಗುಡ್ಡವನ್ನು ಅಭಿವೃದ್ಧಿ 50 ಲಕ್ಷ ರೂ. ಹಾಗೂ ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಇತರೆ ಜೈನ ಮಂದಿರಗಳ ಅಭಿವೃದ್ದಿಗೆ 50 ಲಕ್ಷ ರೂ. ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ ಎಂದು ಸಚಿವ ಪಾಟೀಲ್ ತಿಳಿಸಿದರು.