
ಬೆಳ್ತಂಗಡಿ : ಗುರುವಾಯನಕೆರೆಯ ಯರ್ಡೂರು ಎಂಬಲ್ಲಿ ಯುವಕರೋರ್ವರು ಮನೆಯೊಳಗಡೆ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ತಲೆಯ ಭಾಗದಿಂದ ನೆತ್ತರು ನೆಲದಲ್ಲಿ ಹರಿದು ಹೋಗಿರುವುದು ಕಂಡು ಬಂದಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಯಾರ್ಡೂರು ನಿವಾಸಿ ದಿ. ಶ್ರೀಧರ ಭಟ್ ಮತ್ತು ಶ್ರೀ ಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35) ಎಂಬವರು ಜ.15 ರಂದು ಬೆಳಗ್ಗೆ ಮನೆಯೊಳಗೆ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮುರಳೀಧರ ಭಟ್ ಅವರ ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮನೆಯಲ್ಲಿ ಮುರಳೀಧರ ಭಟ್ ಒಬ್ಬರೇ ಇದ್ದರೆನ್ನಲಾಗಿದೆ. ಮನೆಯ ಒಳಗಿನಿಂದ ಲಾಕ್ ಮಾಡಲಾಗಿದ್ದು, ಒಳಗಡೆ ಫ್ಯಾನ್ ತಿರುಗುತ್ತಿತ್ತು. ಮುರಳೀಧರ ಭಟ್ ಒಬ್ಬರೇ ರಾತ್ರಿ ಮನೆಯಲ್ಲಿ ಇದ್ದುದರಿಂದ ಘಟನೆ ಏನಾಗಿದೆ ಎಂಬ ಮಾಹಿತಿ ಯಾರಿಗೂ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


