Friday, June 26, 2026
Homeಕರಾವಳಿಮಂಗಳೂರುಮಂಗಳೂರು: ಸಾರ್ವಜನಿಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ  ಮಾದಕ ವಸ್ತು ಜಾಲದ ಐವರಿಗೆ ಕಠಿಣ ಸಜೆ ಮತ್ತು...

ಮಂಗಳೂರು: ಸಾರ್ವಜನಿಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ  ಮಾದಕ ವಸ್ತು ಜಾಲದ ಐವರಿಗೆ ಕಠಿಣ ಸಜೆ ಮತ್ತು ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಆದೇಶ

- Advertisement -
- Advertisement -

ಮಂಗಳೂರು: ಸಾರ್ವಜನಿಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ  ಮಾದಕ ವಸ್ತು ಜಾಲದ ಐವರಿಗೆ ಕಠಿಣ ಸಜೆ ಮತ್ತು ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
2022ರ ಜೂನ್ 14ರಂದು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದರು.‌ ಈ ವೇಳೆ, 125 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಾಗಿತ್ತು. ಒಂದೂವರೆ ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಆರೋಪ ಸಾಬೀತಾಗಿದೆ ಎಂದು ಹೇಳಿದ್ದು ಇದೀಗ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ.‌ ಎನ್ಡಿಪಿಎಸ್ ಸ್ಪೆಷಲ್ ಕೋರ್ಟಿನಲ್ಲಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಮಸ್ಕರೇನಸ್ ವಾದಿಸಿದ್ದರು.

ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್‌ ರಮೀಜ್‌ಗೆ 14 ವರ್ಷ ಕಠಿಣ ಸಜೆ ಮತ್ತು₹ 1.45 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿ೦ಗಳ ಕಠಿಣ ಸಜೆ, ಉಪ್ಪಳದ ಅಬ್ದುಲ್‌ ರವೂಫ್‌ ಅಲಿಯಾಸ್‌ ಟಫ್‌ ರವೂಫ್‌ಗೆ 13 ವರ್ಷ ಕಠಿಣ ಸಜೆ ಮತ್ತು ₹1.35 ಲಕ್ಷ ದಂಡ, ದ೦ಡ ಪಾವತಿಸಲು ತಪ್ಪಿದ್ದಲ್ಲಿ 5 ತಿ೦ಗಳ ಕಠಿಣ ಸಜೆ, ಹಾಗೂ ದಕ್ಷಿಣ ಸೂಡಾನ್ ದೇಶದ ಲೂಯಲ್‌ ಡೇನಿಯಲ್‌ ಜಸ್ಟಿಸ್‌ ಬೌಲೊ ಅಲಿಯಾಸ್ ಡ್ಯಾನಿ (25), ಕಾಸರಗೋಡು ಉಪ್ಪಳದ ಮೊಹಿಯುದ್ದೀನ್‌ ರಶೀದ್‌ (24) ಮತ್ತು ತಮಿಳುನಾಡಿನ ಊಟಿ ಕಟ್ಟೇರಿಯ ಸಬಿತಾ ಅಲಿಯಾಸ್‌ ಚಿ೦ಚು (25) ಅವರಿಗೆ ತಲಾ 12 ವರ್ಷ ಕಠಿಣ ಸಜೆ ಮತ್ತು ತಲಾ ₹ 1.25 ಲಕ್ಷ ದಂಡ ಹಾಗೂ ದ೦ಡ ಪಾವತಿಸಲು ತಪ್ಪಿದಲ್ಲಿ 4 ತಿ೦ಗಳ ಕಠಿಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಆದೇಶ ಮಾಡಿದ್ದಾರೆ.

ಈ ಐವರೂ ಮಾದಕ ಪದಾರ್ಥ ಸೇವಿಸಿದ್ದು ಸಾಬೀತಾಗಿದ್ದು, ಈ ಸಂಬಂಧ ಎಲ್ಲರಿಗೂ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!