Friday, October 23, 2026
Homeಕರಾವಳಿಮಂಗಳೂರುಮಂಗಳೂರು: ಕುಲಶೇಖರದಲ್ಲಿ ಅಂಚನ್ ಗುತ್ತಿನ ಮನೆಯಲ್ಲಿ ಭಾರೀ ಕಳ್ಳತನ; ಲಕ್ಷಾಂತರ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ...

ಮಂಗಳೂರು: ಕುಲಶೇಖರದಲ್ಲಿ ಅಂಚನ್ ಗುತ್ತಿನ ಮನೆಯಲ್ಲಿ ಭಾರೀ ಕಳ್ಳತನ; ಲಕ್ಷಾಂತರ ರೂ. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ದೋಚಿದ ಕಳ್ಳರು

- Advertisement -
- Advertisement -

ಮಂಗಳೂರು: ನಗರದ ಪದವು ಗ್ರಾಮದ ಕುಲಶೇಖರ ಸಿಲ್ವರ್ ಗೇಟ್ ಬಳಿಯಿರುವ, ಐತಿಹಾಸಿಕ ಹಿನ್ನೆಲೆಯುಳ್ಳ ಅಂಚನ್ ಕುಟುಂಬಸ್ಥರ ಗುತ್ತಿನ ಪೂಜೆ ಮಾಡುವ ಮನೆಯಲ್ಲಿ ಭರ್ಜರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಬೆಲೆಬಾಳುವ ವಸ್ತುಗಳನ್ನು ಕಳವುಗೈದಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಟೋಬರ್ 21ರ ಮಧ್ಯಾಹ್ನ 2:00 ಗಂಟೆಯಿಂದ ಅಕ್ಟೋಬರ್ 22ರ ಬೆಳಿಗ್ಗೆ 7:00 ಗಂಟೆಯ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ.

ಮನೆಯಲ್ಲಿದ್ದ ಬೀರು ಹಾಗೂ ಇತರೆ ವಸ್ತುಗಳನ್ನು ಜಾಲಾಡಿರುವ ಕಳ್ಳರು, ದೈವಿಕ ಆಭರಣಗಳು ಹಾಗೂ ಕುಟುಂಬಕ್ಕೆ ಸೇರಿದ ಸಾಂಪ್ರದಾಯಿಕ ಒಡವೆಗಳನ್ನು ದೋಚಿದ್ದಾರೆ. ಕಳುವಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ರೂ. 8 ಲಕ್ಷ ಎಂದು ಅಂಚನ್ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಕಳುವಾದ ವಸ್ತುಗಳಲ್ಲಿ 2 ಪವನ್ ತೂಕದ ಚಿನ್ನದ ಸರ, 1 ಚಿನ್ನದ ಬಳೆ, 1 ಸಣ್ಣ ಕರಿಮಣಿ ಸರ, 1 ಚಿನ್ನದ ಉಂಗುರ, 7 ಚಿನ್ನದ ಮೂಗುತ್ತಿ, ತಲಾ ಅರ್ಧ ಪವನ್ ತೂಕದ 2 ಚಿನ್ನದ ನಾಣ್ಯಗಳು, 2 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ, 2 ಬೆಳ್ಳಿಯ ತಟ್ಟೆ, 2 ಬೆಳ್ಳಿಯ ಲೋಟ, 1 ಬೆಳ್ಳಿಯ ಗಿಂಡಿ, 1 ಬೆಳ್ಳಿಯ ಸೊಂಟದ ಪಟ್ಟಿ, 4 ಬೆಳ್ಳಿಯ ಬಳೆಗಳು, ದೈವದ ಅಣಿಯ ಸಣ್ಣ ಗಾತ್ರದ 4 ಬೆಳ್ಳಿಯ ಸೆಟ್‌ಗಳು ಹಾಗೂ 1 ಕಾಣಿಕೆ ಡಬ್ಬಿ ಸೇರಿವೆ.

ಗುತ್ತಿನ ಮನೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುವ ಸ್ಥಳದಲ್ಲಿಯೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!