
ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿ, ನಗ್ನ ಚಿತ್ರಗಳನ್ನು ಇಟ್ಟುಕೊಂಡು ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕುಂಜತ್ತಬೈಲಿನ ದೇವಿನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಶಿಕ್ಷೆಗೆ ಗುರಿಯಾದ ಆರೋಪಿ. ಮಾನ್ಯ ನ್ಯಾಯಾಧೀಶರಾದ ಮಾನು ಕೆ.ಎಸ್. ರವರು ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದಾರೆ.
ಪ್ರಕರಣದ ಸಾರಾಂಶ: ಆರೋಪಿ ಸೋನು ಮ್ಯಾಕ್ಲಿನ್ 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯ ಮನವೊಲಿಸಿದ್ದನು. ಬಳಿಕ 2024ರ ಸೆಪ್ಟೆಂಬರ್‌ನಲ್ಲಿ ಶಕ್ತಿನಗರದ ಬಾಡಿಗೆ ಮನೆಯಲ್ಲಿ ಹಾಗೂ 2024ರ ನವೆಂಬರ್‌ನಿಂದ 2025ರ ಜೂನ್ ಅವಧಿಯಲ್ಲಿ ಅಳಪೆಯ ಕೆಂಬಾರು ಬಳಿಯ ಮನೆಯಲ್ಲಿ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದನು.
ಅಷ್ಟೇ ಅಲ್ಲದೆ, ಬಾಲಕಿ ಸ್ನಾನಗೃಹದಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ, ಅದನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದನು. ಮುಂದೆ ತನ್ನ ಲೈಂಗಿಕ ಆಸೆಗೆ ಒಪ್ಪದಿದ್ದರೆ ಈ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹಾಗೂ ಬಾಲಕಿ ಸೇರಿದಂತೆ ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದನು. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 130/2025) ಪ್ರಕರಣ ದಾಖಲಾಗಿತ್ತು.
ತನಿಖೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ: ಕಂಕನಾಡಿ ನಗರ ಪೊಲೀಸ್ ಠಾಣೆಯ ಆಗಿನ ಇನ್ಸ್‌ಪೆಕ್ಟರ್ ಟಿ.ಡಿ. ನಾಗರಾಜ್ ಅವರು ಪ್ರಕರಣದ ಸುದೀರ್ಘ ತನಿಖೆ ನಡೆಸಿ, ಭದ್ರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ (Special Public Prosecutor) ಸಹನಾ ದೇವಿ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ನ್ಯಾಯಾಲಯ ವಿಧಿಸಿದ ಶಿಕ್ಷೆಯ ವಿವರ: ಆರೋಪಿಯ ವಿರುದ್ಧ ಹೊರಿಸಲಾದ ಕೃತ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಕೆಳಗಿನಂತೆ ಶಿಕ್ಷೆ ವಿಧಿಸಿದ್ದಾರೆ:
- ಪೋಕ್ಸೋ ಕಲಂ 6 ಮತ್ತು BNS ಕಲಂ 64 (2) (m): 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ. ದಂಡ.
- BNS ಕಲಂ 77: 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.
- ಪೋಕ್ಸೋ ಕಲಂ 15: 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.
- ಐಟಿ ಕಾಯ್ದೆ ಕಲಂ 66 (E): 1 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ.


