ಮಂಗಳೂರು : ಸುರತ್ಕಲ್ ಎನ್‌ಐಟಿಕೆ ಸಮುದ್ರ ತೀರದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಮುಂಬೈಯ ವಿವೇಕಾನಂದ ಬಂಜನ್ ಅವರ ಪುತ್ರ ಧ್ಯಾನ್ ಬಂಜನ್ (18) ಹಾಗೂ ಉಮೇಶ್ ಕುಲಾಲ್ ಅವರ ಪುತ್ರ ಅನೀಶ್ ಕುಲಾಲ್ (15) ನೀರು ಪಾಲಾದವರು.
ಇಬ್ಬರು ಮುಂಬೈನವರಾಗಿದ್ದು ಕನ್ನಡ ಜಿಲ್ಲೆಯ ಮಂಗಳೂರಿನ ಸೂರಿಂಜೆಯಲ್ಲಿರುವ ಕುಟುಂಬಸ್ಥರ ಮದುವೆಗೆ ಮುಂಬೈನಿಂದ ಬಂದಿದ್ದರು. ಈ ಪೈಕಿ ಧ್ಯಾನ್ ಬಂಜನ್‌ನನ್ನು ಅಲ್ಲಿದ್ದ ಜೀವರಕ್ಷಕ ಪ್ರದೀಪ್ ಆಚಾರ್ಯ ಅವರು ನೀರಿನಿಂದ ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಬಾಲಕ ಅನೀಶ್ ಕುಲಾಲ್ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. ರಾಜ್ಯ ವಿಪತ್ತು ಸ್ಪಂದನೆ ಪಡೆ, ನುರಿತ ಈಜುಗಾರರ ತಂಡ ಆತನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. 10 ಮಂದಿಯ ತಂಡ ಮಧ್ಯಾಹ್ನದ ಊಟದ ಬಳಿಕ ಕಾರುಗಳಲ್ಲಿ ಮಂಗಳೂರು ನಗರ ಸುತ್ತಾಡಲು ಹೊರಟಿದ್ದರು. ಸಂಜೆಯಾಗುತ್ತಿದ್ದಂತೆ ಸುರತ್ಕಲ್‌ನ ಎನ್ ಐಟಿಕೆ ಬೀಚ್‌ಗೆ ತೆರಳಿದ್ದರು. ಅಲ್ಲಿ ನೀರಿನಲ್ಲಿ ಈಜಾಡುತ್ತಿದ್ದಾಗ ಬೃಹತ್ ಗಾತ್ರದ ತೆರೆಯೊಂದು ಅಪ್ಪಳಿಸಿ ಧ್ಯಾನ್ ಹಾಗೂ ಅನೀಶ್ ಅವರನ್ನು ನೀರು ಎಳೆದೊಯ್ದಿದೆ.
ತಕ್ಷಣ ಜೀವರಕ್ಷಕರು ಸಮುದ್ರಕ್ಕೆ ಜಿಗಿದು ಅವರನ್ನು ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ ಇನ್ನಿಬ್ಬರನ್ನು ರಕ್ಷಿಸಲಾಗಿದೆ ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.