ಮಂಗಳೂರು : ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬೈಕ್ ಸವಾರನ ವಿರುದ್ಧ ದೂರು ದಾಖಲಾಗಿದೆ. ಸಿಪಿಸಿ ಪ್ರವೀಣ್ ಅವರ ಮೇಲೆ ಬೈಕ್ ಸವಾರ ಹಲ್ಲೆ ಮಾಡಿದ್ದು ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏಪ್ರಿಲ್ 18 ರಂದು ಮಧ್ಯಾಹ್ನ 12:37ರ ಸುಮಾರಿಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯ ಹಲೇಷಾ, ಪ್ರವೀಣ್ ಮತ್ತು ಚಂಪಾ ಅವರು ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಪದವು ಕಡೆಯಿಂದ ಬೈಕ್‌ನಲ್ಲಿ ಮಹಿಳೆಯೊಂದಿಗೆ ಬಂದ ಸವಾರನು, ‘ಫ್ರೀ ಲೆಫ್ಟ್’ (Free Left) ರಸ್ತೆಯಲ್ಲಿ ವಾಹನವನ್ನು ಅಡ್ಡಲಾಗಿ ನಿಲ್ಲಿಸಿದ್ದನು. ಇದರಿಂದ ಇತರ ವಾಹನಗಳಿಗೆ ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಹಲೇಷಾ ಅವರು ಬೈಕನ್ನು ಮುಂದಕ್ಕೆ ಕೊಂಡು ಹೋಗುವಂತೆ ಸೂಚಿಸಿದರು.
ಇದರಿಂದ ಕೆರಳಿದ ಸವಾರ ಪೊಲೀಸರನ್ನು “ಬೇವರ್ಸಿ”, “ನಾಯಿಗಳು” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಸಿಪಿಸಿ ಪ್ರವೀಣ್ ಅವರ ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾನೆ. ಅಲ್ಲದೆ, ಅವರ ಕೈಯಲ್ಲಿದ್ದ ಸುಮಾರು ₹28,000 ಮೌಲ್ಯದ ಮೊಬೈಲ್ ಕಿತ್ತುಕೊಂಡು ನೆಲಕ್ಕೆ ಎಸೆದು ಜಖಂಗೊಳಿಸಿದ್ದಾನೆ. ಜೊತೆಯಲ್ಲಿದ್ದ ಮಹಿಳೆಯು ಕೂಡ ಪೊಲೀಸರಿಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಸಮಾಧಾನಪಡಿಸಲು ಯತ್ನಿಸಿದರೂ ಆರೋಪಿಗಳು ಕಿರುಚಾಟ ಮುಂದುವರಿಸಿದ್ದರು. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


