ಪುತ್ತೂರು; ಜ್ವರ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರಿಂದ ಖಾಸಗಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ(47) ಮೃತ ದುರ್ದೈವಿ.
ಕೃಷ್ಣಪ್ಪ ಗೌಡ ತೀವ್ರ ಜ್ವರದ ಹಿನ್ನೆಲೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗಡ್ಡೆ ಇದೆ ಅದನ್ನು ತೆಗೆಯಬೇಕೆಂದು ಹೇಳಿದ್ದಾರೆ. ಗಡ್ಡೆ ತೆಗೆಯಲು ಆಪರೇಷನ್ ಮಾಡಿಸಲು ಕೃಷ್ಣಪ್ಪ ಗೌಡ ಅವರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ ಸಹಿ ಹಾಕಿಸಿಕೊಂಡು ವೈದ್ಯರು ಅಪರೇಷನ್ ಮಾಡಿದ್ದಾರೆ. ಆದರೆ ಅಪರೇಷನ್ ಬಳಿಕ ಕೃಷ್ಣಪ್ಪ ಗೌಡ ಅವರು ಸಾವನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದಲೇ ಸಾವನಪ್ಪಿದ್ದಾರೆ ಎಂದು ರೊಚ್ಚಿಗೆದ್ದ ಸಂಬಂಧಿಕರು, ಸಾರ್ವಜನಿಕರು ರಾತ್ರೋರಾತ್ರಿ ಆಸ್ಪತ್ರೆ ಮುಂಭಾಗ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕೃಷ್ಣಪ್ಪ ಗೌಡ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು, ವೈದ್ಯರ ಎಡವಟ್ಟಿನಿಂದಲೇ ಈ ಸಾವು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ರವಾನಿಸಲಾಗಿದೆ.