ಮಂಗಳೂರು,: ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಉಪ್ಪಳದ ಮುಹಮ್ಮದ್ ರಫೀಕ್ ಬಿ(40) ಬಂಧಿತ ಆರೋಪಿ.
ಆರೋಪಿ ಮುಹಮ್ಮದ್ ರಫೀಕ್ ಬಿ ನಿಷೇಧಿತ ಮಾದಕ ವಸ್ತು ಎಂಡಿಎಂಎನ್ನು ಬೆಂಗಳೂರಿನಿಂದ ಖರೀದಿಸಿ ತಂದು ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಕೆ ಸಿ ರೋಡ್ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯಿಂದ ಒಟ್ಟು 50 ಗ್ರಾಂ ತೂಕದ ರೂ. 2,50,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, 8,000 ರೂ. ನಗದು, ಮೊಬೈಲ್ ಫೋನ್-1, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 2,68,500 ಆಗಬಹುದು ಎಂದು ಮಂಗಳೂರು ನಗರ ಪೊಲೀಸ್ ಪ್ರಕಟನೆ ತಿಳಿಸಿದೆ.ಆರೋಪಿಯ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.