Friday, October 23, 2026
Homeಅಪರಾಧಉದ್ಯಮಿಗಳ ಮಾಹಿತಿ ಅಂಡರ್‌ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ನೀಡಿದ ಆರೋಪ; ನಗದು ಸಹಿತ ವ್ಯಕ್ತಿಯೋರ್ವನ ಬಂಧನ

ಉದ್ಯಮಿಗಳ ಮಾಹಿತಿ ಅಂಡರ್‌ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ನೀಡಿದ ಆರೋಪ; ನಗದು ಸಹಿತ ವ್ಯಕ್ತಿಯೋರ್ವನ ಬಂಧನ

- Advertisement -
- Advertisement -

ಉಡುಪಿ: ಜಿಲ್ಲೆಯ ಉದ್ಯಮಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ಮತ್ತು ಇತರ ಮಾಹಿತಿಗಳನ್ನು ಅಂಡರ್‌ವರ್ಲ್ಡ್ ಆಪರೇಟಿವ್ ಹೇಮಂತ್ ಪೂಜಾರಿಗೆ ನೀಡುತ್ತಿದ್ದ ಆರೋಪದ ಮೇಲೆ 38 ವರ್ಷದ ಸುರೇಶ್ ಅಮೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ ಪೂಜಾರಿ ಈ ಮಾಹಿತಿಗಳನ್ನು ಬಳಸಿ ಉದ್ಯಮಿಗಳಿಗೆ ಕರೆ ಮಾಡಿ, ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನೆಂದು ಆರೋಪಿಸಲಾಗಿದೆ. ಈ ಸಂಬಂಧ ಪಡುಬಿದ್ರೆ ಠಾಣೆಯಲ್ಲಿ ಐದು ಹಾಗೂ ಶಿರ್ವ, ಕಾಪು ಮತ್ತು ಮಣಿಪಾಲ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.

ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ನಿವಾಸಿ ಸುರೇಶ್ ಅಮೀನ್, ಉದ್ಯಮಿಗಳ ಮಾಹಿತಿ ನೀಡುವ ಮೂಲಕ ಸುಲಿಗೆಗೆ ಸಹಕರಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಹಣ ನೀಡದ ಉದ್ಯಮಿಯೊಬ್ಬರನ್ನು ಕೊಲೆ ಮಾಡಲು ಸುರೇಶ್ ಅಮೀನ್ ಮತ್ತು ಹೇಮಂತ್ ಪೂಜಾರಿ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿ, ಸುರೇಶ್ ಅಮೀನ್ ಖಾತೆಗೆ 5 ಲಕ್ಷ ರೂಪಾಯಿ ವರ್ಗಾಯಿಸಿದ್ದ. ಇದರಲ್ಲಿ ಉಳಿದ 4.13 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಜಾಲದಲ್ಲಿ ಇತರರು ಭಾಗಿಯಾಗಿರುವ ಶಂಕೆಯ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!