ಬೆಂಗಳೂರು: ಮಧ್ಯಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಭೋಪಾಲ್ ನಿಂದ ಬೆಂಗಳೂರಿಗೆ ಆಗಮಿಸಿರುವ ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜೂನ್ 18 ರಂದು ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಜೂನ್ 17 ರಂದು ರಾತ್ರಿ ಅಥವಾ ಜೂನ್ 18 ರಂದು ಬೆಳಗ್ಗೆ ಬೆಂಗಳೂರಿನಿಂದ ಭೋಪಾಲ್ ಗೆ ಹಿಂತಿರುಗಲಿದ್ದಾರೆ.
ಸದ್ಯ 229 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 164 ಸ್ಥಾನಗಳನ್ನು ಹೊಂದಿದ್ದು, ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 64 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ನಿಂದ ಓರ್ವ ಅಭ್ಯರ್ಥಿ ಸ್ಫರ್ಧಿಸಿದ್ದಾರೆ.
ಒಬ್ಬ ಅಭ್ಯರ್ಥಿ ಗೆಲುವಿಗೆ 58 ಮತಗಳು ಬೇಕಾಗಿದ್ದು, ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆದ್ದುಕೊಳ್ಳಲಿದೆ. ಮೂರನೇ ಅಭ್ಯರ್ಥಿ ಗೆಲುವಿಗೆ 48 ಮತಗಳನ್ನು ಹೊಂದಿದ್ದು 10 ಮತಗಳ ಕೊರತೆ ಬೀಳಲಿದೆ. ಒಂದು ಸ್ಥಾನ ಗೆದ್ದುಕೊಳ್ಳುವ ಮೂಲಕ 6 ಮತಗಳನ್ನು ಹೆಚ್ಚುವರಿ ಹೊಂದಿದ್ದರೂ ಕಾಂಗ್ರೆಸ್ ಗೆ ಈಗ ಅಡ್ಡ ಮತದಾನದ ಭೀತಿ ಎದುರಾಗಿದೆ.


