ಕೊಡಗು; ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧೆಯನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಮಡಿಕೇರಿ ನಗರದ ಹೊರವಲಯದ ಕ್ಲಬ್ ಮಹೀಂದ್ರ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂಡಬಿದ್ರೆ ನಿವಾಸಿ ಆರೋಪಿ ಅನಿಲ್ (35) ಶಿಕ್ಷೆಗೆ ಗುರಿಯಾದ ಆರೋಪಿ.
ಮಡಿಕೇರಿ ನಗರದ ಹೊರವಲಯದ ಕೆ.ನಿಡುಗಣೆ ಗ್ರಾಮದ ಕ್ಲಬ್ ಮಹೀಂದ್ರ ರೆಸಾರ್ಟ್ ಹಿಂಭಾಗದಲ್ಲಿ ವಾಸವಿದ್ದ ಬಿ.ಪಿ.ಲಲಿತಾ (70) ಎಂಬವರು 2021ರ ಫೆ.22ರಂದು ಒಬ್ಬರೇ ಇದ್ದ ಸಂದರ್ಭ, ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು ನಗದನ್ನು ಕಳವು ಮಾಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 302, 397 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕ್ಲಬ್ ಮಹೀಂದ್ರ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂಡಬಿದ್ರೆ ನಿವಾಸಿಯಾದ ಅನಿಲ್ ಎಂಬಾತನನ್ನು ಅದೇ ವರ್ಷದ ಮಾ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ರವಿಕಿರಣ್, ಎಎಸ್ ಐ ಎಂ.ಎನ್. ಮಂಜುನಾಥ.ಎಂ.ಎನ್ ಹಾಗೂ ಸಿಬ್ಬಂದಿಗಳು ತನಿಖೆ ಕೈಗೊಂಡು ಆರೋಪಿ ಅನಿಲ್ ವಿರುದ್ಧ 2021ರ ಮೇ 29ರಂದು ಮಡಿಕೇರಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಜಿ.ಪ್ರಶಾಂತಿ ಅವರು, ಆರೋಪಿ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನಲೆಯಲ್ಲಿ ಅಪರಾಧಿಗೆ ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ. 45,000/- ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆವನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಸರಕಾರದ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.