ಕುಂದಾಪುರ (ಅ. 07): ಕಾಣೆಯಾಗಿದ್ದ ಯುವಕನೊಬ್ಬ ತೋಟದ ತಂತಿ ಬೇಲಿಗೆ ನೀಡಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ತಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಹೊಸಂಗಡಿ ಗ್ರಾಮದ ಮಾತಿನಮಠದಲ್ಲಿ ನಡೆದಿದೆ. ಹೊಸಂಗಡಿಯ ತಾರ್ಕಿಮಕ್ಕಿ ನಿವಾಸಿ ಕವೀನಾ (26) ಮೃತಪಟ್ಟ ಯುವಕ.
ಅಕ್ಟೋಬರ್ 2ರಂದು ಕಾಣೆಯಾಗಿದ್ದ ಕವೀನಾ ಅವರ ಮೃತದೇಹ ಅಕ್ಟೋಬರ್ 5ರಂದು ಶೇಖರ ನಾಯ್ಕ್ ಎಂಬುವರ ತೋಟದಲ್ಲಿ ಪತ್ತೆಯಾಗಿತ್ತು. ಸಾವು ಅನುಮಾನಾಸ್ಪದವಾಗಿದ್ದರಿಂದ ಮೃತರ ಸಹೋದರ ಪ್ರವೀಣ್ ನೀಡಿದ ದೂರಿನನ್ವಯ ತನಿಖೆ ನಡೆಸಿದ ಅಮಾಸೆಬೈಲು ಪೊಲೀಸರಿಗೆ ಸತ್ಯಾಂಶ ತಿಳಿದುಬಂದಿದೆ.
ತೋಟದ ಮಾಲೀಕ ಶೇಖರ ನಾಯ್ಕ್ ಕಾಡುಪ್ರಾಣಿಗಳಿಂದ ಕೃಷಿ ರಕ್ಷಣೆಗೆ ತಮ್ಮ ಮನೆಯಿಂದಲೇ ತಂತಿ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ್ದರು. ಅ. 2ರ ರಾತ್ರಿ ತೋಟದ ಮೂಲಕ ಸಾಗುತ್ತಿದ್ದ ಕವೀನಾ ಅವರಿಗೆ ವಿದ್ಯುತ್ ಆಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರಿಂದ ಆತಂಕಗೊಂಡ ಶೇಖರ ನಾಯ್ಕ್ ವಿದ್ಯುತ್ ತಂತಿಯನ್ನು ತುಂಡರಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿ, ಘಟನೆಯನ್ನು ಮುಚ್ಚಿಡಲು ಯತ್ನಿಸಿದ್ದರು.
ಸದ್ಯ ನಿರ್ಲಕ್ಷ್ಯ ಹಾಗೂ ಸಾಕ್ಷ್ಯ ನಾಶದ ಆರೋಪದಡಿ ಶೇಖರ ನಾಯ್ಕ್ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಹಾಗೂ ಭಾರತೀಯ ವಿದ್ಯುತ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


