
‘ಕಾಂತಾರ: ಚಾಪ್ಟರ್ 1’ ತುಳುನಾಡಿನ ದೈವಭಕ್ತರ ನಂಬಿಕೆಗಳಿಗೆ ಘಾಸಿ ಮಾಡುತ್ತಿದೆ ಎನ್ನುವಂತಹ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಇದಕ್ಕೆ ಮುಖ್ಯ ಕಾರಣ ಥಿಯೇಟರ್ ಗಳಲ್ಲಿ ಸಿನಿಮಾವನ್ನ ವೀಕ್ಷಿಸಿದ ಜನರು ದೈವದಂತೆಯೇ ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ದೈವಕ್ಕೆ ಅಪಚಾರ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.
ಇದೆಲ್ಲದರ ಮಧ್ಯೆ ದೈವದ ನುಡಿಯ ಬಗ್ಗೆಯೂ ಅಪಪ್ರಚಾರವಾಗುತ್ತಿದೆ. ಕಾಂತಾರ ಚಿತ್ರದ ಬಗ್ಗೆ ‘ದೈವ ನುಡಿಯನ್ನ ನುಡಿದಿದೆʼ ಎಂದು ಅನೇಕರು ಹೇಳಿದ್ದರು. ಈ ಎಲ್ಲಾ ವಿಚಾರಗಳಿಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ‘ದೈವ ಕಾಂತಾರ ಸಿನಿಮಾ ಬಗ್ಗೆ ಏನನ್ನೂ ಹೇಳಿಲ್ಲ’ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಪಿಲಿಚಾಮುಂಡಿ ದೈವವವು ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಎಂದು ದೈವ ನುಡಿದಿತ್ತು ಎನ್ನುವ ವಿಚಾರ ವೈರಲ್ ಆಗುತ್ತಿದ್ದು, ಇದೀಗ ಈ ಎಲ್ಲ ವೈರಲ್ ವಿಚಾರಗಳಿಗೆ ಮಂಗಳೂರು ತಾಲೂಕಿನ ಬಜಪೆ ಸಮೀಪದ ಪಡುಪೆರಾರ ಕ್ಷೇತ್ರದಲ್ಲಿರುವ ಬ್ರಹ್ಮ ದೇವರು ಬಲವಾಂಡಿ-ಪಿಲ್ಚಂಡಿ ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು,ಈ ಬಗ್ಗೆ ದೈವವು ಸೂಕ್ತ ಅಭಯ ನೀಡಿದೆ ಹೊರತು ಕಾಂತಾರ ಬಗ್ಗೆ ಯಾವುದೇ ನುಡಿಯನ್ನು ದೈವ ನೀಡಿರುವುದಿಲ್ಲ. ಯಾವುದೇ ಚಲನಚಿತ್ರದ ಬಗ್ಗೆಯೂ ದೈವ ಅಭಯ ನುಡಿ ನೀಡಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದೆ. ಈ ಮೂಲಕ ವಿವಾದಕ್ಕೆ ತೆರೆ ಬಿದ್ದಿದೆ.


