ಮಣಿಪಾಲ: ಇಲ್ಲಿನ 80 ಬಡಗಬೆಟ್ಟು ಗ್ರಾಮದ ತಾಂಗೋಡೆ 2ನೇ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಏ.13 ಭಾನುವಾರದಂದು ನಡೆದಿದೆ.
ಬಂಧಿತ ಆರೋಪಿಯು ಭಟ್ಕಳದ ಗುಲ್ಜಾರ್ ಸ್ಟ್ರೀಟ್ ನಿವಾಸಿಯಾಗಿರುವ ಆರೀಬ್ ಅಹಮ್ಮದ್(31) ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಮಣಿಪಾಲ ಸಮೀಪದ 80 ಬಡಗಬೆಟ್ಟು ಗ್ರಾಮದ ತಾಂಗೋಡೆ 2ನೇ ಕ್ರಾಸ್ ಬಳಿ ಆರೋಪಿ ಆರೀಬ್ ಅಹಮ್ಮದ್ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನುವ ದೂರು ಉಡುಪಿಯ ಸೆನ್ ಪೊಲೀಸ್ ಠಾಣೆಗೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಆ ವೇಳೆ ಆತನ ಬಳಿ ಇದ್ದ ಚೀಲದಲ್ಲಿ ಗಾಂಜಾ ಪತ್ತೆಯಾಗಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ರೂ. 5,75,000/ ಮೌಲ್ಯದ 7 ಕೆಜಿ 304 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್ ಸೇರಿದಂತೆ ಒಟ್ಟು ರೂ. 5,96,520/ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಆಂಧ್ರ ಪ್ರದೇಶದ ವಿಜಯವಾಡದಿಂದ ಗಾಂಜಾ ಖರೀದಿಸಿರುವುದಾಗಿ ಹೇಳಿಕೊಂಡಿದ್ದಾನೆ. ಪ್ರಕರಣದ ಕುರಿತು ಹೆಚ್ಚಿನ ತಪಾಸಣೆ ನಡೆಯುತ್ತಿದೆ.