ಮಂಗಳೂರು; ಉಳ್ಳಾಲದಲ್ಲಿ ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ, ಹೆಡ್ ಕಾನ್ಸ್ಟೇಬಲ್ ಲೋಕೇಶ್ ಅವರು ಕರ್ತವ್ಯದಲ್ಲಿದ್ದ ವೇಳೆ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿ ಅಪ್ರಾಪ್ತ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಢಿಕ್ಕಿ ಹೊಡೆದ ಕಾರು ಮುಕಚೇರಿಯ ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಾಲಕನನ್ನು ಪೊಲೀಸರು ಸೊಮವಾರ ಸಂಜೆ ವಶಕ್ಕೆ ಪಡೆದಿದ್ದು, ಚಾಲಕ ವಿದ್ಯಾರ್ಥಿಯಾಗಿದ್ದು, ಅಪ್ರಾಪ್ತ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ ನಿವಾಸಿಯೊಬ್ಬರಿಗೆ ಸೇರಿದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಆರೋಪಿ ಚಾಲಕ ಕಾರನ್ನು ನಿಲ್ಲಿಸದೇ, ತಡೆಯಲು ಮುಂದಾದ ಸಂಚಾರಿ ಠಾಣೆಯ ಪೇದೆ ಲೋಕೇಶ್ ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.