ತೆಕ್ಕಟ್ಟೆ: ಖಾಸಗಿ ಪಿಯು ಕಾಲೇಜಿನ ಶಾಲಾ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತೆಕ್ಕಟ್ಟೆ ರಾ.ಹೆ.66ರ ಪ್ರಮುಖ ಸರ್ಕಲ್ ನಲ್ಲಿ ಹೆಮ್ಮಾಡಿ ಹೈಮಾಸ್ಟ್ ಕಂಬಕ್ಕೆ ಢಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೆ. 19ರ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ದ್ವಿಚಕ್ರ ವಾಹನವೊಂದು ಏಕಾಏಕಿ ಬ್ರಹ್ಮಾವರದಿಂದ ಹೆಮ್ಮಾಡಿ ಕಡೆಗೆ ಚಾಲಕ ಸಹಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ ಶಾಲಾ ವಾಹನಕ್ಕೆ ಅಡ್ಡಬಂದ ಪರಿಣಾಮ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಘಟನೆಯ ತೀವ್ರತೆಗೆ ವಾಹನ ಚಾಲಕನ ತಲೆ, ಕಣ್ಣು ಹಾಗೂ ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಸ್ಥಳೀಯರು ತತ್‌ಕ್ಷಣವೇ ದಾಖಲಿಸಿದ್ದಾರೆ ಎನ್ನಲಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ವರದಿ ತಿಳಿಸಿದೆ.


