ಮಂಗಳೂರು: ಕೋವಿಡ್ 19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ದ.ಕ. ಜಿಲ್ಲೆಯ ದಿನಗೂಲಿ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಜೀವನ ಸಾಗಿಸಲು ಅನುಕೂಲವಾಗುವಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ 300 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿಯ ಸಲಹೆಯಂತೆ ಈ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಾರಂಭದಲ್ಲಿ 100 ಕ್ವಿಂಟಾಲ್ ಅಕ್ಕಿ ನೀಡುವ ಉದ್ದೇಶ ಹೊಂದಲಾಗಿತ್ತು. ಬಳಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈವರೆಗೆ 268 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರ್ವ ಧರ್ಮದವರಿಗೂ ಅಕ್ಕಿ: ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಕುದ್ರೋಳಿ ಕ್ಷೇತ್ರದಲ್ಲಿ ಜಗತ್ತಿಗೆ ಏಕತೆಯನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಚಿಂತನೆಯಂತೆ ಲಾಕ್‌ಡೌನ್ ಸಂದರ್ಭ ಸರ್ವಧರ್ಮದ ಬಡವರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ.
ಸಂಘಟನೆಗಳಿಗೂ ಸಹಕಾರ: ಅವಿಭಜಿತ ದ.ಕ. ಜಿಲ್ಲೆಯ ನಾನಾ ಕಡೆಯಿಂದ ಅಕ್ಕಿಗೆ ಬೇಡಿಕೆ ಬಂದಿದ್ದು ಯಾರನ್ನೂ ನಿರಾಸೆಗೊಳಿಸದೆ ಅಕ್ಕಿ ವಿತರಣೆ ಮಾಡಲಾಗಿದೆ. ಅಲ್ಲದೆ ಟೈಲರ್ ಅಸೋಸಿಯೇಶನ್, ಫೋಟೋ ಗ್ರಾಫರ್ ಅಸೋಸಿಯೇಶನ್ ಕೂಡಾ ಅಕ್ಕಿ ಬೇಡಿಕೆ ಸಲ್ಲಿಸಿದ್ದು ಅವರಿಗೂ ವಿತರಿಸಲಾಗಿದೆ.
1000 ಮಂದಿಗೆ ನಿತ್ಯ ಅನ್ನದಾನ: ಕುದ್ರೋಳಿ ದೇವಸ್ಥಾನವು ಕಲ್ಪಟ್ರಸ್ಟ್ ಸಹಕಾರದಿಂದ ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು, ನಿರಾಶ್ರಿತರು, ಕೆಲಸವಿಲ್ಲದೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸುಮಾರು 1000 ಮಂದಿಗೆ ಮಾ.26ರಿಂದ ನಿತ್ಯ ಅನ್ನದಾನ ಮಾಡಲಾಗುತ್ತಿದೆ.