ಮಂಗಳೂರು: ಆಂಧ್ರ ಪ್ರದೇಶದಿಂದ ಮಂಗಳೂರು ಮೂಲಕ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೂಲತಃ ಉಪ್ಪಳ ಮಂಗಲ್ಪಾಡಿ, ಸದ್ಯ ಬಂದ್ಯೋಡ್ ಕುಬನೂರು ನಿವಾಸಿ ಮೊಯ್ದಿನ್ ಶಬೀರ್ (38), ಆಂಧ್ರಪ್ರದೇಶದ ಮಹೇಶ್ ದ್ವಾರಿಕಾನಥ ಪಾಂಡೆ (30), ಕೇರಳದ ಅಜಯ್ ಕೃಷ್ಣ (33) ಹಾಗೂ ಹರಿಯಾಣದ ಜೀವನ್ ಸಿಂಗ್ (35) ಬಂಧಿತರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, “ಫೆ.17ರಂದು ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮಿತ್ತಕೋಡಿ ಬಳಿ ನಮ್ಮ ತಂಡವು ವಾಹನ ತಪಾಸಣೆ ನಡೆಸುತ್ತಿದ್ದಾಗ ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ ಟಾಟಾ 407 ವಾಹನದಲ್ಲಿ ಮತ್ತು ಮಾರುತಿ ಆಲ್ಟೋ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ 119 ಕೆ.ಜಿ ಗಾಂಜಾ, 5 ಮೊಬೈಲ್ ಫೋನ್, ಮೀನು ಸಾಗಾಟಕ್ಕೆ ಬಳಸುವ ಕ್ರೇಟ್ ಗಳು ಹಾಗೂ ಇತರ ಸೊತ್ತುಗಳು ಸೇರಿದಂತೆ ಒಟ್ಟು 51 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಆರೋಪಿಗಳು ಕರ್ನಾಟಕ, ಕೇರಳ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡಿ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಆಂಧ್ರಪ್ರದೇಶದಿಂದ ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬೃಹತ್ ಗಾಂಜಾ ಮಾರಾಟ, ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಬಂಧಿತ ಆರೋಪಿಗಳ ವಿರುದ್ಧ ಕೇರಳದ ಕಾಸರಗೋಡು, ಆಲಪುಝ್, ಆಂಧ್ರ ಪ್ರದೇಶದ ವಿವಿಧ ಠಾಣೆಗಳಲ್ಲಿ ಗಾಂಜಾ ಸಾಗಾಟ, ದರೋಡೆ, ಹಲ್ಲೆಗೆ ಸಂಬಂಧಿಸಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.