ಬೆಂಗಳೂರು: ಮಂಗಳೂರಿನ ಕುಡುಪು ಎಂಬಲ್ಲಿ ಗುಂಪು ಹತ್ಯೆಗೊಳಗಾದ ಅಶ್ರಫ್ ಕುಟುಂಬಕ್ಕೆ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡರು ಹದಿನೈದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇರಳದ ಸಂಸದರಾಗಿರುವ ಕೆ.ಸಿ. ವೇಣುಗೋಪಾಲ್ ಮನವಿಯಂತೆ ಹತ್ಯೆಗೊಳಗಾದ ಅಶ್ರಫ್ ಕುಟುಂಬಸ್ಥರೊಂದಿಗೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಇಂದು ಚರ್ಚೆ ನಡೆಸಿದರು.
ಚರ್ಚೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಕರ್ನಾಟಕ ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಗುಂಪು ಹತ್ಯಾ ಕಾಯ್ದೆ ಪ್ರಕಾರ ಅಶ್ರಫ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿ ಕೂಡಾ ಚರ್ಚೆ ನಡೆಸಲಾಯಿತು.
ನಂತರ ತಮ್ಮ ವೈಯಕ್ತಿಕ ಖಾತೆಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಹತ್ತು ಲಕ್ಷ ರುಪಾಯಿ ಹಾಗೂ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಐದು ಲಕ್ಷ ರೂಪಾಯಿಯ ಪರಿಹಾರದ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಅಶ್ರಫ್ ಕುಟುಂಬಸ್ಥರೊಂದಿಗೆ ಮಂಜೇಶ್ವರ ಶಾಸಕ ಎ.ಕೆ. ಅಶ್ರಫ್ ಮತ್ತು ಮಲಪ್ಪುರಂ ಕಾಂಗ್ರೆಸ್ ಮುಖಂಡ ನಾಸಿರ್ ವೆಂಗರ ಉಪಸ್ಥಿತರಿದ್ದರು.