Saturday, June 27, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ನ27 ರಿಂದ 30 ರವರೆಗೆ "ಎಕ್ಸೆಲ್ ಪರ್ಬ-2025" ಅಕ್ಷರೋತ್ಸವ...

ಬೆಳ್ತಂಗಡಿ : ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ನ27 ರಿಂದ 30 ರವರೆಗೆ “ಎಕ್ಸೆಲ್ ಪರ್ಬ-2025” ಅಕ್ಷರೋತ್ಸವ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜಿನ ವತಿಯಿಂದ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಅಕ್ಷರೋತ್ಸವ ಹಾಗೂ ಎಕ್ಸೆಲ್ ಪರ್ಬ-2025 ಸಮಾರಂಭವು ನ.27ರಿಂದ 30ರ ವರೆಗೆ ವಿವಿಧ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾಲೇಜಿನ ಅರಮಲೆಬೆಟ್ಟ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ತಿಳಿಸಿದರು.

ಅವರು ನ.25 ರಂದು ಮಂಗಳವಾರ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾಲ್ಕು ದಿನಗಳ ಸಮಾರಂಭವು ಬೆಳಗ್ಗೆ 9ರಿಂದ ರಾತ್ರಿ 10.30ರ ವರೆಗೆ ಸಭಾ ಕಾರ್ಯಕ್ರಮಗಳ ಜತೆಗೆ ಎಕ್ಸೆಲ್ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ನಡೆಯಲಿದೆ.

ನ. 27ರಂದು ಬೆಳಗ್ಗೆ 9ಕ್ಕೆ ಆಮಂತ್ರಣ ಪರಿವಾರದ ದಶಮಾನೋತ್ಸವ ಸಂಭ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ, 10.30ಕ್ಕೆ  ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಸುರೇಂದ್ರ ಎಸ್.ವಾಗ್ಲೆ ನೂತನ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದು, ದ.ಕ.ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಶ್ರೀನಾಥ್ ಎಂ.ಪಿ. ಅವರು ಎಕ್ಸೆಲ್ ಅಕ್ಷರ ಗೌರವ ಪ್ರದಾನ ಮಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಕನ್ನಡ ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ, ಸಂಜೆ 6.30ರಿಂದ ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.

ನ. 28ರಂದು ಮಧ್ಯಾಹ್ನ 1.30ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬೆಳಗಾವಿ ನಿಡುಸೋಸಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6.30ಕ್ಕೆ ಎಕ್ಸೆಲ್ ಪರ್ಬ ಸಮಾರಂಭವನ್ನು ನಟ ರಮೇಶ್ ಅರವಿಂದ್ ಉದ್ಘಾಟಿಸಲಿದ್ದು, ಭಾರತ ಪರಿಕ್ರಮ ಯಾತ್ರಾ ಸಾಧಕ ಸೀತಾರಾಮ ಕೆದಿಲಾಯ, ಡಿಡಿಪಿಐ ಶಶಿಧರ್ ಜಿ.ಎಸ್, ಪತ್ರಕರ್ತ ಯೋಗೀಶ್ ಹೊಳ್ಳ ಎಂ. ಭಾಗವಹಿಸಲಿದ್ದಾರೆ.

ನ. 29ರಂದು ಮಧ್ಯಾಹ್ನ 1.30ಕ್ಕೆ ಶೈಕ್ಷಣಿಕ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಮುಖ್ಯಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅಡಿಷನಲ್ ಎಸ್‌ಪಿ ಅನಿಲ್‌ಕುಮಾರ್ ಭೂಮ ರೆಡ್ಡಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ವೆನ್ಲಾಕ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಸದಾನಂದ ಪೂಜಾರಿ, ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ| ವಿಶ್ವನಾಥ ಪಿ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಮೂಡುಬಿದಿರೆಯ ಲೆಕ್ಕ ಪರಿಶೋಧಕ ಆಕಾಶ್ ದೀಪ್ ಭಾಗವಹಿಸಲಿದ್ದಾರೆ. ನ. 30ರಂದು ಸಂಜೆ 6.30ಕ್ಕೆ ಕಾಲೇಜು ವಾರ್ಷಿಕೋತ್ಸವದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸಹಿತ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಬಿ. ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ಪ್ರಾಂಶುಪಾಲ ಡಾ| ನವೀನ್‌ಕುಮಾರ್ ಮರಿಕೆ, ಅರಮಲೆ ಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ| ಪ್ರಜ್ವಲ್ ಕಜೆ ಗೌರವ ಉಪಸ್ಥಿತಿ ಇರುತ್ತಾರೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ| ನವೀನ್‌ಕುಮಾರ್ ಮರಿಕೆ, ಉಪಪ್ರಾಂಶುಪಾಲ ಲೋಹಿತ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!