ಬೆಂಗಳೂರು: ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ನಮಗೆ ಅಚ್ಚರಿಯಾಗಿದೆ.
ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಜನರನ್ನು ಮನೆಯೊಳಗೆ ಬಂಧಿಯಾಗುವಂತೆ ಹೇಳಲಾಗುತ್ತಿದೆ. ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಕೊರೋನಾ ಜವಾಬ್ದಾರಿಯನ್ನು ಸರ್ಕಾರ ನೀಡಿದೆ.
ಈ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ. ಈ ವಿಚಾರವಾಗಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ.
ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ.
ಈ ವಿಚಾರ ಕೊರೋನಾ ವೈರಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿರುವ ಸಚಿವರೊಬ್ಬರ ನಡೆ, ನೈತಿಕ ಹೊಣೆಗಾರಿಕೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕಿಂತ ಬಿಜೆಪಿಯ ಹೈಕಮಾಂಡ್ ಏನು ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದು ಹೇಳಿದರು.