Saturday, August 1, 2026
Homeಕರಾವಳಿಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ತಾರತಮ್ಯ: ಆಗಸ್ಟ್ 4 ರಂದು ಬೃಹತ್ ಪ್ರತಿಭಟನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ತಾರತಮ್ಯ: ಆಗಸ್ಟ್ 4 ರಂದು ಬೃಹತ್ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳ ಮೇಲೆ ಅವೈಜ್ಞಾನಿಕ ಪಾರ್ಕಿಂಗ್ ದರಗಳನ್ನು ವಸೂಲಿ ಮಾಡುತ್ತಿದ್ದು, ಖಾಸಗಿ ವಾಹನಗಳಿಗೆ ನೀಡಲಾಗುತ್ತಿರುವ ಸವಲತ್ತುಗಳನ್ನು ತಮಗೆ ನಿರಾಕರಿಸುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಆಗಸ್ಟ್ 4 ರಂದು ಕಾವೂರು ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಆನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಪಾಲಿಸಿ ಸಂಚರಿಸುವ ಪ್ರವಾಸಿ ವಾಹನಗಳ ದಿನನಿತ್ಯದ ದುಡಿಮೆಯ ಮೇಲೆ ವಿಮಾನ ನಿಲ್ದಾಣದ ಈ ನೂತನ ನೀತಿಯು ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ. ಖಾಸಗಿ ವಾಹನಗಳಿಗೆ ಪ್ರಯಾಣಿಕರ ಡ್ರಾಪ್ ಹಾಗೂ ಪಿಕಪ್‌ಗಾಗಿ 10 ನಿಮಿಷ ಉಚಿತ ಸಮಯ ನೀಡಲಾಗಿದ್ದು, ತದನಂತರ ₹100 ದರವನ್ನು ನಿಗದಿಪಡಿಸಲಾಗಿದೆ. ಆದರೆ, ತೆರಿಗೆ ಪಾವತಿಸುವ ಪ್ರವಾಸಿ ವಾಹನಗಳಿಗೆ ಪಿಕಪ್ ಸಮಯದಲ್ಲಿ ಒಂದು ನಿಮಿಷವೂ ಉಚಿತ ಅವಕಾಶ ನೀಡದೆ ಲಘು ವಾಹನಗಳಿಗೆ ₹180 ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಿಗೆ ₹500 ರಿಂದ ₹600 ವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಹಿಂದಿನ ದರಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕವಾಗಿದೆ.

ಇದಲ್ಲದೆ, ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಪ್ರವಾಸಿ ವಾಹನಗಳಿಗೆ ಕಾಯ್ದಿರಿಸಿದ ಪ್ರತ್ಯೇಕ ಸಾಲಿನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೂ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ಅನಗತ್ಯವಾಗಿ ವಿಳಂಬವಾಗಿ, ಪ್ರವಾಸಿ ವಾಹನಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಈ ತಾರತಮ್ಯ ನೀತಿಗಳನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಪ್ರವಾಸಿ ವಾಹನ ಚಾಲಕರ ಹಿತರಕ್ಷಿಸಬೇಕು ಎಂದು ಆಗ್ರಹಿಸಿ ಕಾವೂರು ಸರ್ಕಲ್ ಬಳಿ ಪ್ರತಿಭಟನೆ ನಡೆಸುವುದಾಗಿ ಸಂಘಟಕರು ಎಚ್ಚರಿಸಿದ್ದಾರೆ.

- Advertisement -

Latest News

error: Content is protected !!