ಮಂಗಳೂರು : ಕಾಮಗಾರಿ ಕೆಲಸದ ಬಿಲ್ ಮಂಜೂರು ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಟು ಕೊನೆಗೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಮ್.ಆರ್.ಸ್ವಾಮಿ ಮನೆಯಲ್ಲಿ ಶೋಧನೆ ಮಾಡಿದಾಗ ವಿದ್ಯುತ್ ಗುತ್ತಿಗೆದಾರರೊಬ್ಬರ ಸಂಸ್ಥೆಯ ಹೆಸರಿರುವ ಎನ್‌ವಲಪ್ ಕವರಿನಲ್ಲಿ ರೂ 30,000/- ಹಣ ಪತ್ತೆಯಾಗಿದೆ. ಇದೀಗ ಈ ಹಿನ್ನೆಲೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಮ್.ಆರ್.ಸ್ವಾಮಿ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ.
ಎಂ.ಆರ್ ಸ್ವಾಮಿ,ಲಂಚವಾಗಿ ತನ್ನಿಂದ ಪಡೆದುಕೊಂಡಿರುತ್ತಾರೆ ಎಂಬುದಾಗಿ ವಿದ್ಯುತ್ ಗುತ್ತಿಗೆದಾರರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ದಿನಾಂಕ 04. 10.2024 ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂಬುದಾಗಿ ಎಂ.ಎ ನಟರಾಜ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರು ತಿಳಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ , ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ಇನ್ಸ್ಪೆಕ್ಟರ್ ಅಮಾನುಲ್ಲಾ.ಎ, ಇನ್ಸ್ಪೆಕ್ಟರ್ ಸುರೇಶ್ ಕುಮಾರ್ ಪಿ ,ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್.ಸಿ.ಎಲ್ ಹಾಗೂ ಸಿಬ್ಬಂದಿ ಭಾಗವಹಿಸಿದರು.