ಮಹಾನಗರ: ಡಿಜಿಟಲ್ ಪಬ್ಲಿಕ್ ಲೈಬ್ರೆರಿಗೆ ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಆರಂಭಿಸಿರುವ ಈ ಯೋಜನೆ ಸದ್ಯ ನೋಂದಣಿಯಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ.
ದಕ್ಷಿಣ ಕನ್ನಡದಲ್ಲಿ ಡಿಜಿಟಲ್ ಲೈಬ್ರೆರಿಗೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ 17,14,579 ಆಗಿದ್ದು, ದ್ವಿತೀಯ ಸ್ಥಾನದಲ್ಲಿದೆ. 18,76, 677 ಸದಸ್ಯರನ್ನು ಹೊಂದಿ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ಇನ್ನು ತೃತೀಯ ಸ್ಥಾನದಲ್ಲಿ ಕಲಬುರುಗಿ ಇದೆ.
ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳಲ್ಲಿ ಸೆ. 15ರ ವರೆಗೆ ಒಟ್ಟು 9,33,340 ಮಂದಿ ಡಿಜಿಟಲ್ ನೋಂದಣಿ ಮಾಡಿ ಕೊಂಡಿದ್ದಾರೆ. ನಗರ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ 7,81,239 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮೂಲಕ ಡಿಜಿಟಲ್ ಲೈಬ್ರೆರಿಯಲ್ಲಿ ಇ- ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆಗಳು, ಶೈಕ್ಷಣಿಕ ವೀಡಿಯೋಗಳು ಲಭ್ಯ ಇವೆ.
https://www.karnatakadigitalpubliclibrary.org/ ಅಥವಾ ಸಾರ್ವಜನಿಕ ಗ್ರಂಥಾಲಯ ಆಯಪ್ ಮೂಲಕ ಉಚಿತ ವಾಗಿ ನೋಂದಣಿಯಾಗಬಹುದು. ಹಳೆಯ, ಹೊಸ ಪುಸ್ತಕಗಳು ಸಹಿತ ಗ್ರಂಥಾಲಯದ ಸಮಗ್ರ ಅನುಭವ ಪಡೆಯಬಹುದಾಗಿದೆ. ಗ್ರಂಥಾಲಯಗಳಲ್ಲಿಯೂ ಡಿಜಿಟಲ್ ಲೈಬ್ರೆರಿ ಬಳಕೆದಾರರಿಗಾಗಿ ಕಂಪ್ಯೂಟರ್ ಸಿಸ್ಟಂಗಳನ್ನು ಒದಗಿಸಲಾಗುತ್ತದೆ.
ಕೊರೊನಾ ಸಂದರ್ಭ ಡಿಜಿಟಲ್ ಲೈಬ್ರೆರಿ ಸೇವೆ ಆರಂಭಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಅನೇಕ ಮಂದಿ ಹಿರಿಯ ನಾಗರಿಕರು ಕೂಡ ಡಿಜಿಟಲ್ ಗ್ರಂಥಾಲಯದ ಮೂಲಕ ಓದುತ್ತಿದ್ದಾರೆ