ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆಯಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ 11 ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ಬಳಿಕ ಕೋರ್ಟ್ ಮುಂದೆ ಸರ್ಕಾರದ ಪರವಾದ ಅಭಿಯೋಜಕರಾದ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದರು.
ಈ ವೇಳೆ ಕೊಲೆಯಾದ ರೇಣುಕಾಸ್ವಾಮಿ ಗೌತಮ್ ಎಂಬ ಹೆಸರಿನ ಇನ್ಸ್ ಸ್ಟಾಗ್ರಾಂನಿಂದ ಪವಿತ್ರಾ ಗೌಡ ಅವರಿಗೆ ಫೆಬ್ರವರಿ 27, 2024ರಂದು ಮೆಸೇಜ್ ಮಾಡಿದ್ದ. ಆದರೆ ಫೆಬ್ರವರಿಯಲ್ಲಿ ಆತ ಕಳುಹಿಸಿದ ಮೆಸೇಜ್ ಗೆ ಅವರು ಆತನನ್ನು ಜೂನ್ ನಲ್ಲಿ ಟ್ರ್ಯಾಪ್ ಮಾಡಿದ್ದು ಯಾಕೆ? ಪವಿತ್ರಾ ಗೌಡ ಅವರು ಪೊಲೀಸರಿಗೆ ದೂರು ನೀಡಬಹುದಿತ್ತು. ಇಲ್ಲವೇ ರೇಣುಕಾಸ್ವಾಮಿ ಸಂದೇಶ ಕಳುಹಿಸಿದ್ದಂತ ಗೌತಮ್ ಹೆಸರಿನ ಇನ್ಸ್ ಸ್ಟಾಗ್ರಾಂ ಅಕೌಂಟ್ ಬ್ಲಾಕ್ ಮಾಡಬಹುದಾಗಿತ್ತು ಎಂದು ವಾದ ಮಂಡಿಸಿದ್ರು.
ಪವಿತ್ರಾ ಗೌಡ ಅವರು ಪವನ್ ನಂಬರ್ ನೀಡಿದ್ದಾರೆ. ಆ ಬಳಿಕ ಪವನ್ ಪವಿತ್ರಾ ಗೌಡ ಹೆಸರಿನಲ್ಲಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿದ್ದಾನೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದಂತ ರಾಘವೇಂದ್ರ, ಅನುಕುಮಾರ್ ಮತ್ತು ಜಗ್ಗ ಅವರು ಕಿಡ್ನ್ಯಾಪ್ ಮಾಡಿದ್ದು ಪೂರ್ವ ನಿಯೋಜಿತ ಕೃತ್ಯ. ಜೂನ್.8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಆರೋಪಿಗಳು ಅಪಹರಿಸಿಕೊಂಡು ಬಂದಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆಯ ಶೆಡ್ ಗೆ ರೇಣುಕಾಸ್ವಾಮಿ ಕರೆತಂದಿದ್ದಾರೆ. ಈ ಶೆಡ್ ನಲ್ಲಿ ರೇಣುಕಾಸ್ವಾಮಿ ಕರೆತರುವ ಮುನ್ನವೇ ಶೆಡ್ ನಲ್ಲಿ ಹಲವರಿದ್ದರು. ಆರೋಪಿಗಳಾದ 3, 4, 5, 6, 7, 8, 9 ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿಕೊಂಡು ಬರುವ ವೇಳೆಗಾಗಲೇ ಶೆಡ್ ನಲ್ಲಿ ಇದ್ದರು. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರೀ ಪ್ಲಾನ್ ಮರ್ಡರ್ ಎಂಬುದಾಗಿ ಶಂಕೆ ವ್ಯಕ್ತವಾಗಿದೆ ಎಂಬುದಾಗಿ ಪೊಲೀಸರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ವಾದಿಸಿದರು.
ಈ ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ನಾಳೆ ಮಧ್ಯಾಹ್ನ 12.30ಕ್ಕೆ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.