ಮಂಗಳೂರು; ಡಿಜಿಟಲ್ ಅರೆಸ್ಟ್ ಬೆದರಿಕೆ ಒಡ್ಡಿ ಸೈಬರ್ ಕಳ್ಳರು ಮಹಿಳೆಯಿಂದ 3.10 ಕೋಟಿ ರೂಪಾಯಿ ದೋಚಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಈ ಬಗ್ಗೆ ಲೆನಿ ಪ್ರಭು ಎಂಬವರು ದೂರು ನೀಡಿದ್ದು , ನನ್ನ ಮೊಬೈಲ್ ಗೆ 2025ರ ಜನವರಿ 15ರಂದು ಅಪರಿಚಿತ ಸಂಖ್ಯೆಯಿಂದ ಮಿಸ್ ಕಾಲ್ ಬಂದಿತ್ತು. ಆ ನಂಬರ್‌ಗೆ ಮತ್ತೆ ಕರೆ ಮಾಡಿದ್ದೆ. ಆಗ ಮಾತನಾಡಿದ್ದ ಮಹಿಳೆ, ‘ನೀವು ಚೀನಾಕ್ಕೆ ಕಳುಹಿಸಿದ ಪಾರ್ಸೆಲ್ ವಾಪಾಸ್ ಬಂದಿದೆ. ಅದರಲ್ಲಿ 150 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಪ್ರಕರಣಕ್ಕೆ 75 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಇದೆ’ ಎಂದು ತಿಳಿಸಿದ್ದಳು. ‘ನಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ’ ಎಂದು ಹೇಳಿದ್ದೆ. ಜನರಲ್ ಪೋಸ್ಟ್ ಆಫೀಸ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ ಆ ಮಹಿಳೆ, ‘ಇಲ್ಲ… ಅದನ್ನು ನೀವೆ ಪಾರ್ಸೆಲ್ ಮಾಡಿದ್ದೀರಿ. ನಿಮ್ಮ ಗುರುತಿನ ಚೀಟಿಯನ್ನು ಬಳಸಿ ನಿಮ್ಮದೇ ಹೆಸರಿನಲ್ಲಿ ಪಾರ್ಸೆಲ್ ಕಳುಹಿಸಿಸಲಾಗಿದೆ’ ಎಂದು ತಿಳಿಸಿದ್ದರು’ ಎಂದು ಲೆನಿ ಪ್ರಭು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ನಂತರ ಮತ್ತೆ ಕರೆ ಮಾಡಿದ್ದ ಆ ಮಹಿಳೆ, ‘ನಾವು ನಿಮಗೆ ಸಹಾಯ ಮಾಡುತ್ತೇವೆ’ ಎಂದು ನಂಬಿಸಿ ನನ್ನ ವೈಯಕ್ತಿಕ ವಿವರ ಪಡೆದುಕೊಂಡರು. ನಿಮಗೆ ನಿರಾಕ್ಷೇಪಣಾ ಪ್ರಮಾಣಪತ್ರ ಸಿಗಬೇಕಾದರೆ ಸಂಬಳದ ಶೇ 93ರಷ್ಟನ್ನು ಕಳುಹಿಸಬೇಕು ಎಂದರು. ಅವರ ಸೂಚನೆಯಂತೆ ನಾನು ಅವರು ಸೂಚಿಸಿದ ಖಾತೆಗೆ ಜ.17ರಂದು ₹ 55 ಲಕ್ಷ ಆರ್‌ಟಿಜಿಎಸ್ ಮಾಡಿದ್ದೆ.’ ‘ಈ ವಿಷಯಯನ್ನು ಯಾರಿಗೂ ತಿಳಿಸಬಾರದು ಎಂದು ಭಯ ಹುಟ್ಟಿಸಿದ್ದರು. ಅವರು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಜ.17ರಿಂದ ಜುಲೈ 4ರವರೆಗೆ ಹಂತ ಹಂತವಾಗಿ ಒಟ್ಟು ₹3.10 ಕೋಟಿ ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದೇನೆ. ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಾನು ಮೋಸ ಹೋಗಿರುವುದು ಆ ಬಳಿಕವಷ್ಟೇ ಗೊತ್ತಾಯಿತು ಎಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ಒತ್ತಾಯಿಸಿದ್ದಾರೆ’.


