ಬೆಂಗಳೂರು : ಅಪಾಯಕಾರಿ ಬೆಳವಣಿಗೆಯೊಂದರಲ್ಲಿ ಕೊರೊನಾ ವೈರಸ್ ಶುಕ್ರವಾರ ಭಾರೀ ಸದ್ದು ಮಾಡಿದ್ದು, ಬರೋಬ್ಬರಿ
48 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಎಂದು ನಿಟ್ಟುಸಿರು ಬಿಡುವಾಗಲೇ ರಾಜ್ಯದಲ್ಲಿ ಒಂದೇ ದಿನ ಏಕಾಏಕಿ 48 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಈ ವರೆಗೂ ತುಸು ಸುರಕ್ಷಿತ ವಲಯದಲ್ಲಿ ಇದ್ದ ಕರ್ನಾಟಕ ಇದೀಗ ಅಪಾಯಕಾರಿ ವಲಯದತ್ತ ದಾಪುಗಾಲಿಟ್ಟಿದೆ.ಶುಕ್ರವಾರ ಪತ್ತೆಯಾದ 48 ಪ್ರಕರಣಗಳು ಸೇರಿದಂತೆ ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 48 ಪ್ರಕರಣಗಳು ದೃಢಪಟ್ಟಿವೆ. ಈ ಹಿಂದೆ ದಿನವೊಂದರಲ್ಲಿ 44 ಪ್ರಕರಣಗಳು ವರದಿಯಾಗಿದ್ದೇ ಗರಿಷ್ಠವಾಗಿತ್ತು.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಬಿಡುಗಡೆಯಾದ ಅಧಿಕೃತ ಮಾಹಿತಿಯಂತೆ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ 14 ದಾವಣಗೆರೆ ಜಿಲ್ಲೆಯಿಂದ ವರದಿಯಾಗಿದ್ದರೆ, ಉತ್ತರ ಕನ್ನಡದ ಭಟ್ಕಳ 12, ಬೆಳಗಾವಿ 11, ಬೆಂಗಳೂರು 7, ಚಿತ್ರದುರ್ಗ 3 ಮತ್ತು ಬಳ್ಳಾರಿಯ ಓರ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತರಲ್ಲಿ ಐದು ತಿಂಗಳ ಪುಟಾಣಿ ಮಗು ಹಾಗೂ 80 ವರ್ಷದ ವೃದ್ಧರೂ ಇದ್ದಾರೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 47 ರಿಂದ 61ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 72 ರಿಂದ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ರಿಂದ 24ಕ್ಕೆ ಏರಿದ್ದರೆ, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯು 156 ರಿದಂ 163ಕ್ಕೆ ಏರಿಕೆ ಕಂಡು ಬಂದಿದೆ.
ಒಂದೇ ಒಂದು ದಿನಗಳಲ್ಲಿ ಮೂರು ಜಿಲ್ಲೆಗಳ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕೊರೊನಾ ವೈರಸ್ ರಣಕೇಕೆಗೆ ದಾವಣಗೆರೆ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ತತ್ತರಿಸಿ ಹೋಗಿವೆ.
ಒಂದೇ ದಿನ ಹತ್ತಕ್ಕಿಂತ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ಮೂರು ಜಿಲ್ಲೆಗಳಲ್ಲಿ 37 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.
ಕೊರೊನಾ ವೈರಸ್ ಹೆಮ್ಮಾರಿ ಪುಟ್ಟ ಮಕ್ಕಳನ್ನೂ ಬಿಟ್ಟಿಲ್ಲ. ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ 5 ತಿಂಗಳ ಹಸುಗೂಸಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. 10 ವರ್ಷದೊಳಗಿನ ಆರು ಮಕ್ಕಳಿಗೆ ಇಂದು ಒಂದೇ ದಿನ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಪೋಷಕರಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಇನ್ನು ಬೆಳಗಾವಿಯ ಹಿರೇಬಾಗೇವಾಡಿಯ 128 ಸಂಖ್ಯೆಯ ರೋಗಿಯಿಂದ ಪಕ್ಕದ ಮನೆಯವರಿಗೆ ಸೋಂಕು ತಗುಲಿದೆ.
ಈ ಮೂಲಕ ಬೆಳಗಾವಿ ಪಾಲಿಗೆ ಶುಕ್ರವಾರ ಅಶುಭವಾಗಿವೆ. ಹಿರೇಬಾಗೇವಾಡಿಯಲ್ಲಿ ಇದೀಗ ಕೋವಿಡ್ ಮನೆ ಮಾಡಿದೆ.
ದೆಹಲಿಯ ನಿಜಾಮುದ್ದಿನ್ ತಬ್ಲೀಘಿ ಜಮಾತ್ ಮರ್ಕಜ್ ಗೆ ಹೋಗಿ ಬಂದಿದ್ದ ವ್ಯಕ್ತಿಯ ಸಂಪರ್ಕದಿಂದ ಇಡೀ ಗ್ರಾಮ ಈಗ ತೊಂದರೆ ಅನುಭವಿಸುವಂತಾಗಿದೆ. ಹಿರೇಬಾಗೇವಾಡಿ ಗ್ರಾಮದ ಪಿ.128 ದ್ವಿತೀಯ ಸಂಪರ್ಕಕ್ಕೆ ಬಂದ ಹತ್ತು ಜನರಿಗೆ ಕೋವಿಡ್-19 ಸೋಂಕು ತಗುಲಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ 12 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುವುದರೊಂದಿಗೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಇದೀಗ ಆರೆಂಜ್ ಝೋನ್ ನಲ್ಲಿ ಇದ್ದ ಉತ್ತರ ಕನ್ನಡ ಜಿಲ್ಲೆ ರೆಡ್ ಜೋನ್ ನತ್ತ ಹೊರಳುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 12 ಪ್ರಕರಣಗಳು ದಾಖಲಾಗಿತ್ತು. 11 ಜನ ಗುಣಮುಖರಾಗಿದ್ದರು. ಆದರೆ ಈಗ ಒಂದೇ ದಿನ 12 ಸೋಂಕು ಪ್ರಕರಣ ಕಂಡುಬಂದಿದ್ದು, ಈ ಎಲ್ಲಾ ಪ್ರಕರಣಗಳೂ ಕೂಡ ನಿರ್ಬಂಧಿತ ಪ್ರದೇಶವಾದ ಆದ ಭಟ್ಕಳದಲ್ಲೇ ಕಂಡುಬಂದಿದೆ. ಅಲ್ಲದೇ ಜಿಲ್ಲೆಯ ಎಲ್ಲಾ 24 ಪ್ರಕರಣಗಳು ಭಟ್ಕಳವೊಂದರಲ್ಲೇ ಪತ್ತೆಯಾಗಿರೋದು ಗಮನಾರ್ಹ.
ಕಳೆದ 4 ದಿನದ ಹಿಂದೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದ ಯುವತಿಯ ಕುಟುಂಬದವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಸುದ್ದಿ ಕೇಳಿ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ.
ಹಸಿರು ವಲಯದತ್ತ ಹೋಗುತ್ತಿದ್ದ ಜಿಲ್ಲೆ ಕೆಂಪು ವಲಯಕ್ಕೆ ಹೋಗೋ ಸಾಧ್ಯತೆ ಇದ್ದು, ಜಿಲ್ಲೆಗೆ ನೀಡಿರುವ ಎಲ್ಲಾ ವಿನಾಯಿತಿಗಳನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರದ ಕುರಿತಾಗಿ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದು, ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ.
ಇನ್ನು, ಮೈಸೂರು ಕೆಲ ದಿನಗಳ ಹಿಂದೆ ಕೊರೋನಾ ಹಾಟ್?ಸ್ಪಾಟ್ ಆಗಿ ಬದಲಾಗಿಹೋಗಿತ್ತು. ಆದರೆ ಇಲ್ಲಿ, ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಹೊಸ ಪ್ರಕರಣಗಳು ದಾಖಲಾಗಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾ ವೈರಾಣು ಸೋಂಕು ನಿಲ್ಲುವಂತೆ ಕಾಣಿಸುತ್ತಿಲ್ಲ.
ಶುಕ್ರವಾರವೂ 7 ಜನರ ವರದಿ ಪಾಸಿಟಿವ್ ಬಂದಿದ್ದು, ನಾಲ್ವರು ಪಿ-653 ಸಂಪರ್ಕಿತರಾಗಿದ್ದಾರೆ. ಇವರಲ್ಲಿ ಮೂವರಿಗೆ ಕಂಟೈನ್ಮೆಂಟ್ ಝೋನ್ ಪಾದರಾಯನಪುರ ವಾರ್ಡ್ ಮೂಲಕ ಸೋಂಕು ತಗುಲಿದೆ ಎಂಬುದಾಗಿ ಆರೋಗ್ಯ ಇಲಾಖೆ ಹೇಳಿದೆ.
ಚಿತ್ರದುರ್ಗದಲ್ಲಿ ಸುದೀರ್ಘ ಕಾಲದ ಬಳಿಕ ಮೊದಲ ಬಾರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಈ ಹಿಂದಿನ ಓರ್ವ ರೋಗಿ ಚೇತರಿಸಿಕೊಂಡಿದ್ದರು. ಹೀಗಾಗಿ ಜಿಲ್ಲೆ ಗ್ರೀನ್ ಝೋನ್ನಲ್ಲಿತ್ತು. ಇದೀಗ ಏಕಾಏಕಿ ಮೂರು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆ ಕಿತ್ತಳೆ ವಲಯಕ್ಕೆ ಬಂದಿದೆ.
ಈ ಮೂವರಿಗೂ ಗುಜರಾತ್ನ ಅಹಮದಾಬಾದ್ಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಇದೆ. ಇನ್ನು ಬಳ್ಳಾರಿಯ ಒಬ್ಬರಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇವರ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಬೇಸರದ ವಿಚಾರವೆಂದರೆ 48 ಜನರಿಗೆ ಸೋಂಕು ಕಾಣಿಸಿಕೊಂಡಿರುವ ಹೊತ್ತಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಕೇವಲ 10. ಬೆಂಗಳೂರಿನ 7 ಜನರು ಗುಣಮುಖರಾಗಿದ್ದರೆ, ಬಳ್ಳಾರಿಯ ಇಬ್ಬರು ಮತ್ತು ಧಾರವಾಡದ ಒಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 30 ಜನರು ಕೊರೊನಾ ವೈರಸ್ನಿಂದ ಸಾವಿಗೀಡಾಗಿದ್ದಾರೆ. ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಸದ್ಯ 346 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇವರಲ್ಲಿ 340 ಜನರ ಆರೋಗ್ಯ ಸ್ಥಿರವಾಗಿದ್ದು ಪ್ರತ್ಯೇಕ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.